ನವದೆಹಲಿ: ಅಂಬೇಡ್ಕರ್ ಬಗ್ಗೆ ಅವಹೇಳಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿರುವ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಕೈ ಬಿಡಬೇಕೆಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನಲ್ಲಿ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಖಂಡನೀಯ. ಅಂಬೇಡ್ಕರ್ ಬಗ್ಗೆ ಅವರು ನೀಡಿರುವ ಹೇಳಿಕೆಯನ್ನು ಇಡೀ ದೇಶ ಒಪ್ಪುವುದಿಲ್ಲ. ಹೀಗಾಗಿ ಅವರು ತಮ್ಮ ಸ್ಥಾನಕ್ಕೆ ರಾಜನೀಮೆ ನೀಡಬೇಕು. ಪ್ರಧಾನಿ ಮೋದಿ ಅವರು ಕೂಡಲೇ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಮಿತ್ ಶಾ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಬೇಕಿತ್ತು. ಆದರೆ, ಆ ಹೇಳಿಕೆ ಹಾಗೂ ಶಾ ಬೆನ್ನಿಗೆ ಪ್ರಧಾನಿ ನಿಂತಿರುವುದು ತಪ್ಪು. ಪ್ರಧಾನಿ ಮೋದಿ ಅವರಿಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೇಲೆ ನಂಬಿಕೆ ಹಾಗೂ ಗೌರವ ಇದ್ದರೆ ಮಧ್ಯರಾತ್ರಿಯೊಳಗೆ ಅಮಿತ್ ಶಾ ಅವರನ್ನು ವಜಾ ಮಾಡಬೇಕು ಎಂದು ಗುಡುಗಿದ್ದಾರೆ. ಡಾ ಬಿಆರ್ ಅಂಬೇಡ್ಕರ್ ಅವರಿಗಾಗಿ ಜನರು ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ, ಇವರು ಅವರ ಬಗ್ಗೆ ಅವಮಾನ ಮಾಡುತ್ತಾರೆ. ಇದು ದೇಶದ ಬಗ್ಗೆಯೇ ಅವಮಾನ ಮಾಡಿದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ