ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹಲಕ್ಷ್ಮೀ‘ ಯೋಜನೆಯಲ್ಲಿ ಸುಮಾರು 5,000 ಕೋಟಿ ರೂಪಾಯಿಗೂ ಅಧಿಕ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿರುವ ಜೆಡಿಎಸ್ ಶಾಸಕ ಟಿ.ಎ. ಶರವಣ ಅವರು, ಈ ಬಗ್ಗೆ ಸಮಗ್ರ ಲೆಕ್ಕ ಪರಿಶೋಧನೆ ನಡೆಸುವಂತೆ ಅಕೌಂಟೆಂಟ್ ಜನರಲ್ (AG) ಅವರಿಗೆ ಪತ್ರ ಬರೆದಿದ್ದಾರೆ. ಸರ್ಕಾರದ ಲೆಕ್ಕಾಚಾರಕ್ಕೂ ಮತ್ತು ಫಲಾನುಭವಿಗಳಿಗೆ ತಲುಪಿರುವ ಹಣಕ್ಕೂ ಭಾರಿ ವ್ಯತ್ಯಾಸವಿದೆ ಎಂದು ಅವರು ಈ ಪತ್ರದಲ್ಲಿ ಗಂಭೀರವಾಗಿ ದೂರಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ ಶಾಸಕ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕರಾದ ಟಿ.ಎ. ಶರವಣ ಅವರು ಅಕೌಂಟೆಂಟ್ ಜನರಲ್ ಅವರಿಗೆ ಪತ್ರ ಬರೆದಿದ್ದು, ಯೋಜನೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗಿನ ಎಲ್ಲ ಲೆಕ್ಕವನ್ನು ಪರಿಶೀಲನೆ ಮಾಡಿ ಯೋಜನೆಯ ಹಗರಣವನ್ನು ಬಯಲಿಗೆಳೆಯುವಂತೆ ಒತ್ತಾಯಿಸಿದ್ದಾರೆ.
ತಪ್ಪು ಮಾಹಿತಿ ನೀಡಿದ ಸರ್ಕಾರ: ಸದನದಲ್ಲಿ ವಿರೋಧ ಪಕ್ಷದ ಪ್ರಶ್ನೆಗಳಿಗೆ ಉತ್ತರಿಸುವಾಗ ಸರ್ಕಾರವು ಪ್ರತಿ ತಿಂಗಳು ಹಣ ಪಾವತಿಸುತ್ತಿರುವುದಾಗಿ ತಿಳಿಸಿದೆ. ಆದರೆ ವಾಸ್ತವದಲ್ಲಿ ಸುಮಾರು 5,000 ಕೋಟಿ ರೂ.ಗಳಷ್ಟು ತಪ್ಪು ಲೆಕ್ಕವನ್ನು ತೋರಿಸಲಾಗುತ್ತಿದೆ ಎಂದು ಶರವಣ ಆರೋಪಿಸಿದ್ದಾರೆ.
ಅನಿಯಮಿತ ಹಣ ಪಾವತಿ: ಯೋಜನೆಯಡಿ ಪ್ರತಿ ಕುಟುಂಬದ ಯಜಮಾನಿಗೆ ಮಾಸಿಕ 2,000 ರೂ. ನೀಡಬೇಕಾಗಿದ್ದು, ಇದಕ್ಕೆ ಸರ್ಕಾರ ಪ್ರತಿ ತಿಂಗಳು ಸುಮಾರು 2,600 ಕೋಟಿ ರೂ. ವ್ಯಚ್ಚ ಮಾಡುತ್ತಿದೆ. ಆದರೆ, ಫಲಾನುಭವಿಗಳಿಗೆ ಪ್ರತಿ ತಿಂಗಳು ಹಣ ಜಮೆ ಮಾಡದೆ ಮಧ್ಯೆ ಒಂದೊಂದು ತಿಂಗಳು ಪಾವತಿಯನ್ನು ನಿಲ್ಲಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಲೆಕ್ಕ ಪರಿಶೋಧನೆಗೆ ಆಗ್ರಹ: ಗೃಹಲಕ್ಷ್ಮೀ ಯೋಜನೆ ಪ್ರಾರಂಭವಾದ ದಿನದಿಂದ ಇಲ್ಲಿಯವರೆಗಿನ ಎಲ್ಲ ಆರ್ಥಿಕ ವಹಿವಾಟುಗಳನ್ನು ಲೆಕ್ಕ ಪರಿಶೋಧನೆ (Audit) ನಡೆಸಿ ವರದಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಜಯೇಂದ್ರ ಕಲೆಕ್ಷನ್ ಕಿಂಗ್.. ಯಡಿಯೂರಪ್ಪನ ಹೆಸರು ಹಾಳಾಗಲು ಪುತ್ರನೇ ಕಾರಣ | ಡಿಕೆಶಿ ಗರಂ



















