ಹಾಸನ : ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಇಂದು ಆತಂಕಕಾರಿ ಘಟನೆ ನಡೆದಿದೆ. ತಹಸಿಲ್ದಾರ್ ಕಿರುಕುಳ ಆರೋಪಿಸಿ ಉಪ ತಹಸಿಲ್ದಾರ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಬೇಲೂರು ತಾಲೂಕು ಕಚೇರಿ ಆವರಣದಲ್ಲಿ, ತಹಸಿಲ್ದಾರ್ ಎದುರೇ ಉಪ ತಹಸಿಲ್ದಾರ್ ತನ್ವಿರ್ ಅಹಮ್ಮದ್ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಕಚೇರಿಯಲ್ಲೇ ಈ ಘಟನೆ ನಡೆದಿರುವುದು ಸಿಬ್ಬಂದಿ ವಲಯದಲ್ಲಿ ಬೆಚ್ಚಿಬೀಳುವಂತೆ ಮಾಡಿದೆ.
ತಹಸಿಲ್ದಾರ್ ಶ್ರೀಧರ್ ಅವರು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು, ಉದ್ದೇಶಪೂರ್ವಕವಾಗಿ ಹೆಚ್ಚುವರಿ ಹಾಗೂ ಒತ್ತಡದ ಕೆಲಸ ನೀಡುತ್ತಿದ್ದಾರೆ ಎಂದು ತನ್ವಿರ್ ಅಹಮ್ಮದ್ ಆರೋಪಿಸಿದ್ದಾರೆ. ಈ ಕಿರುಕುಳದಿಂದಲೇ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.
ಘಟನೆಯ ನಂತರ ತಕ್ಷಣವೇ ಉಪ ತಹಸಿಲ್ದಾರ್ ತನ್ವಿರ್ ಅಹಮ್ಮದ್ ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರಕರಣ ಸಂಬಂಧ ತಹಸಿಲ್ದಾರ್ ಶ್ರೀಧರ್ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದ್ದು, ಘಟನೆ ಬಗ್ಗೆ ತನಿಖೆ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ : ಪಾರ್ಕಿಂಗ್ ಜಾಗದಲ್ಲೇ ಪಾರ್ಕ್ ಮಾಡಿದ್ರೂ ಫೈನ್… ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಪೊಲೀಸರ ಕಿರಿಕ್!



















