ಬೆಂಗಳೂರು: ಕಾಂಗ್ರೆಸ್ ಸರ್ಕಾರದ ನಾಯಕರಿಗೆ ರಾಜ್ಯಪಾಲರ ಆತಂಕ ಶುರುವಾಗಿ ಬಿಟ್ಟಿದೆ. ಈಗಾಗಲೇ ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರು ಇನ್ನೂ ಹಲವು ನಾಯಕರ ಪ್ರಕರಣದಲ್ಲಿಯೂ ಇದೇ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತು ಕೇಳಿ ಬಂದಿತ್ತು. ಈಗ ಅದು ಸತ್ಯ ಅನಿಸುತ್ತಿದೆ.
ಕೆಐಎಡಿಬಿಯಿಂದ (KIADB) ಸಿದ್ದಾರ್ಥ ಟ್ರಸ್ಟ್ ಗೆ ಸಿಎ ನಿವೇಶನ (CA Site) ಮಂಜೂರು ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಆರೋಪ ಕೇಳಿ ಬಂದಿದೆ. ಈ ಕುರಿತು ವಿವರಣೆ ನೀಡುವಂತೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಸ್ಥರು ಟ್ರಸ್ಟಿಗಳಾಗಿರವ ಸಿದ್ಧಾರ್ಥ ವಿಹಾರ ಟ್ರಸ್ಟ್ ಗೆ ನಿಯಮ ಬಾಹಿರ ಹಾಗೂ ತರಾತುರಿಯಲ್ಲಿ ಕೆಐಎಡಿಬಿಯಿಂದ ಐದು ಎಕರೆ ಸಿ.ಎ ನಿವೇಶನ ಮಂಜೂರು ಮಾಡಲಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದರು.
ಈ ಕುರಿತು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದರು. ಸದ್ಯ ಇದೇ ವಿಷಯವಾಗಿ ರಾಜ್ಯಪಾಲರು ವಿವರಣೆ ಕೇಳಿದ್ದಾರೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯಪಾಲರಿಗೆ ಎರಡು ಸಂವಿಧಾನ ಇವೆ. ಬಿಜೆಪಿ, ಜೆಡಿಎಸ್ ಗೆ ಒಂದು ಸಂವಿಧಾನ. ಕಾಂಗ್ರೆಸ್ ಗೆ ಒಂದು ಸಂವಿಧಾನ. ಇದು ಕೇವಲ ಸೇಡಿನ ರಾಜಕಾರಣ ಎಂದು ವಾಗ್ದಾಳಿ ನಡೆಸಿದ್ದಾರೆ.