ಬೆಂಗಳೂರು: ಸಾಮಾಜಿಕ ಕಾರ್ಯಕರ್ತೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ (Congress) ಶಾಸಕ, ಮಾಜಿ ಸಚಿವ ವಿನಯ್ ಕುಲಕರ್ಣಿ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಇನ್ನೊಂದೆಡೆ ತನ್ನ ವಿಡಿಯೋ ಹಾಗೂ ಮೊಬೈಲ್ ಸಂಭಾಷಣೆ ಪ್ರಸಾರ ಮಾಡಲು ಷಡ್ಯಂತರ ರೂಪಿಸಿದ್ದಾರೆ ಎಂದು ಶಾಸಕ ವಿನಯ್ ಕುಲಕರ್ಣಿ ಪ್ರತಿದೂರು ಸಲ್ಲಿಸಿದ್ದಾರೆ.
ಈ ಆರೋಪದ ಹಿನ್ನೆಲೆಯಲ್ಲಿ ಖಾಸಗಿ ಸುದ್ದಿ ವಾಹಿನಿ ಮತ್ತು ಸಂತ್ರಸ್ತೆ ವಿರುದ್ಧ ಸಂಜಯ ನಗರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಸಂತ್ರಸ್ತೆ ಬ್ಲಾಕ್ ಮೇಲ್ ಮಾಡಿದ್ದಾಳೆ. ಸಂತ್ರಸ್ತೆ ಮೂಲಕ ನನ್ನ ವಿರುದ್ಧ ಸಂಚು ರೂಪಿಸಿ ಮಾನಹಾನಿ ಮಾಡಲಾಗಿದೆ ಎಂದು ಶಾಸಕ ವಿನಯ ಕುಲಕರ್ಣಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಈ ವೇಳೆ ಈ ವಿಷಯವಾಗಿ ಮಾತನಾಡಿರುವ ಶಾಸಕ ವಿನಯ್ ಕುಲಕರ್ಣಿ, ನಾನು ಅವಳನ್ನು ಮುಟ್ಟಿದ್ದರೆ ನನ್ನ ತಾಯಿಯನ್ನು ಮುಟ್ಟಿದ ಹಾಗೆ. ನಿಮಗೆ ಇಷ್ಟೇ ಹೇಳುತ್ತೇನೆ. ವಿಡಿಯೋ ಕಾಲ್ ಮಾಡಿದ್ದರು. ಆ ವಿಡಿಯೋ ಕಾಲ್ ಇಟ್ಟುಕೊಂಡು ಇಷ್ಟೊಂದು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ಇಷ್ಟು ವರ್ಷಗಳ ಕಾಲ ಇದ್ದೇನೆ. ಕೆಲವರು ನನ್ನ ಹಿಂದೆ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ಹಲವಾರು ಬದಲಾವಣೆ ಆಗುವುದಿದೆ. ಹೀಗಾಗಿ ಈ ರೀತಿ ಮಾಡಿದ್ದಾರೆ. ನನ್ನ ವಿರುದ್ಧ ಒಂದು ಕೇಸ್ ನಡೆಯುತ್ತಿದೆ. ಆ ಪ್ರಕರಣದ ಸಾಕ್ಷಿಗಳ ಮೇಲೆ ಪ್ರಭಾವ ಮಾಡಿಸುವ ಸಲುವಾಗಿ ಈ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.