ಬಳ್ಳಾರಿ: ಪೋಕ್ಸೊ ಸಂತ್ರಸ್ತೆಯ ಹೆಸರು ಬಹಿರಂಗಪಡಿಸಿದ ಆರೋಪದ ಮೇಲೆ ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಬಳ್ಳಾರಿ ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬಳ್ಳಾರಿಯಲ್ಲಿ ಜ.1ರಂದು ನಡೆದಿದ್ದ ಘರ್ಷಣೆ, ಕೊಲೆ ಖಂಡಿಸಿ ಬಿಜೆಪಿ ಬಳ್ಳಾರಿಯ ಎಪಿಎಂಸಿ ಪ್ರಾಂಗಣದಲ್ಲಿ ಜ.17ರಂದು ಪ್ರತಿಭಟನಾ ಸಮಾವೇಶ ಹಮ್ಮಿಕೊಂಡಿತ್ತು. ಈ ಸಮಾವೇಶದಲ್ಲಿ ಭಾಷಣ ಮಾಡುವ ಭರದಲ್ಲಿ ಶ್ರೀರಾಮುಲು ಅವರು ಪೋಕ್ಸೊ ಸಂತ್ರಸ್ತೆಯೊಬ್ಬರ ಗುರುತು ಬಹಿರಂಗಪಡಿಸಿದ ಸಂಬಂಧ ಜ.18ರಂದು ಎಫ್‌ಐಆರ್ ದಾಖಲಾಗಿದೆ.

ಶಾಸಕ ಭರತ್ ರೆಡ್ಡಿ ಅವರು ಯುವಕರನ್ನು ಯಾವ ಹಂತಕ್ಕೆ ಮಾದಕ ವ್ಯಸನಿಗಳನ್ನಾಗಿ ಮಾಡಿದ್ದಾರೆ ಎಂದರೆ, ನಾಲ್ಕೈದು ಮಂದಿ ವಿದ್ಯಾರ್ಥಿಗಳು ಡ್ರಗ್ಸ್ ತೆಗೆದುಕೊಂಡು ನಗರದ ಶಾಲೆಯೊಂದರ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಮುಂದುವರಿದು, ವಿದ್ಯಾರ್ಥಿನಿಯ ಹೆಸರು, ಶಾಲೆ, ತರಗತಿ ಮತ್ತು ಜಾತಿಯನ್ನೂ ಶ್ರೀರಾಮುಲು ಬಹಿರಂಗಪಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಭಾನುವಾರ ಎಪಿಎಂಸಿ ಠಾಣೆ ಇನ್‌ಸ್ಪೆಕ್ಟರ್ ನೀಡಿದ ದೂರು ಆಧರಿಸಿ ಮಹಿಳಾ ಠಾಣೆ ಪೊಲೀಸರು, ಪೋಕ್ಸೊ ಕಾಯ್ದೆಯ ಕಲಂ 23(1) (2) ಮತ್ತು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸೆಕ್ಷನ್ 74ರ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು | ಜ.29ರಂದು ‘ಬೆಂಗಳೂರು ಚಲೋ’ಗೆ ಕರೆ



















