ಬೆಂಗಳೂರು : 79ನೇ ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲಾ ರೀತಿ ತಯಾರಿ ಮಾಡಿಕೊಳ್ಳಲಾಗಿದೆ. ಮಳೆ ಅಡ್ಡಿಯಾಗದಂತೆಯೂ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಿ.ಸಿ. ಟಿವಿ, ಪಾರ್ಕಿಂಗ್ ಸೇರಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವೂ ನಡೆಯಲಿದೆ. ಬಿಬಿಎಂಪಿ ವ್ಯಾಪ್ತಿಯ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವ್, ಸ್ವಾತಂತ್ರ್ಯೋತ್ಸವಕ್ಕೆ ಸೂಕ್ತ ರೀತಿಯಲ್ಲಿ ಸಾರ್ವಜನಿಕರು ಸಹಕರಿಸಬೇಕು. ಪಾಸ್ ಹೊಂದಿರುವವರು ನಿಗದಿಪಡಿಸಿದ ಗೇಟ್ ಗಳಲ್ಲಿ ಪ್ರವೇಶ ಪಡೆಯಬೇಕು ಎಂದಿದ್ದಾರೆ.
ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲಾ ರೀತಿ ಸಿದ್ಧತೆಯಾಗಿದೆ. ಕಾರ್ಯಕ್ರಮಕ್ಕೆ ಬರುವವರು 8 ಗಂಟೆಯೊಳಗೆ ಆಸೀನರಾಗಬೇಕು. ಕಾರ್ಯಕ್ರಮಕ್ಕೆ ಸಿಗರೇಟ್, ಛತ್ರಿ, ಲೈಟರ್, ಲಗೇಜ್ ಬ್ಯಾಗ್ ಗಳಿಗೆ ನಿಷೇಧ ಹೇರಲಾಗಿದೆ ಎಂದಿದ್ದಾರೆ.
ಇನ್ನು, ಈ ಬಾರಿ 30 ತುಕಡಿಗಳು ಪರೇಡ್ ನಲ್ಲಿ ಭಾಗಿಯಾಗಲಿದ್ದಾರೆ. ಗೋವಾ ಪೊಲೀಸ್, ಬಿಎಸ್.ಎಫ್, ಡಾಗ್ ಸ್ಕ್ವಾಡ್, ಶಾಲಾ ಮಕ್ಕಳು ಪರೇಡ್ ನಲ್ಲಿ ಭಾಗವಹಿಸುತ್ತಾರೆ. ಎಂದಿದ್ಧಾರೆ.
ಪಿಂಕ್ ಪಾಸ್ ಇರುವವರು ಗೇಟ್ ನಂಬರ್ 2 ರಿಂದ ಪ್ರವೇಶ ಪಡೆಯಬೇಕು. ವೈಟ್ ಪಾಸ್ ಇರುವವರು, ಮಾಧ್ಯಮದವರು ಗೇಟ್ ನಂಬರ್ 4 ರಿಂದ ಪ್ರವೇಶ ಪಡೆಯಬೇಕು ಎಂದು ತಿಳಿಸಿದ್ದಲ್ಲದೇ, 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನೇಮಿಸಲಾಗಿದೆ. ವಿಶೇಷವಾಗಿ 100ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾ ಅಳವಡಿಸಲಾಗಿದೆ. ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಗೊಳಿಸಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ರ ತನಕ ಸಂಚಾರ ನಿರ್ಬಂಧ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿ.ವಿ.ಆರ್ ಜಂಕ್ಷನ್ ನಿಂದ ಕಾಮರಾಜ ಜಂಕ್ಷನ್, ಕಬ್ಬನ್ ಉದ್ಯಾನವ ಸುತ್ತಮುತ್ತ ರಸ್ತೆಗಳಿಗೆ ನಿರ್ಬಂಧ ಹೇರಿ, ಪರ್ಯಾಯ ಮಾರ್ಗವನ್ನು ಸೂಚಿಸಿದ್ದಾರೆ.
“ಒಂಬತ್ತು ಗಂಟೆಗೆ ಸಿಎಂ ಧ್ವಜಾರೋಹಣ :”
ಅಂದು ಬೆಳಗ್ಗೆ ಸಿಎಂ ಸಿದ್ದರಾಮಯ್ಯ ಒಂಬತ್ತು ಗಂಟೆಗೆ ಧ್ವಜಾರೋಹಣ ಮಾಡಲಿದ್ದಾರೆ. ಸ್ವಾತಂತ್ರ್ಯೋತ್ಸವಕ್ಕೆ ಈ ಬಾರಿ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಆನ್ ಲೈನ್ ಮೂಲಕ ಇ – ಪಾಸ್ ವ್ಯವಸ್ಥೆ ಮಾಡಲಾಗಿದೆ. ಸೇವಾಸಿಂಧು ವೆಬ್ ಸೈಟ್ ಮೂಲಕ ಆಧಾರ್ ಕಾರ್ಡ್ ಲಿಂಕ್ ಕೊಟ್ಟು, ಇ ಪಾಸ್ ಪಡೆಯಬಹುದಾಗಿದೆ. ಗಣ್ಯರು ಸೇರಿ ಒಟ್ಟು ಒಂಭತ್ತು ಸಾವಿರ ಜನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಾಣಿಕ್ ಷಾ ಮೈದಾನ ಸುತ್ತ ನೂರು ಸಿಸಿ ಕ್ಯಾಮೆರಾ, ಎರಡು ಲಗೇಜ್ ಸ್ಕ್ಯಾನರ್ ವ್ಯವಸ್ಥೆ ಮಾಡಲಾಗಿದೆ.



















