ಚೆನ್ನೈ : ಬಾಲಿವುಡ್‌ನ ಖ್ಯಾತ ನಟಿ ಅಲಿಯಾ ಭಟ್ ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರೊಂದಿಗೆ ಪೋಷಕತ್ವದ ಕುರಿತು ನಡೆಸಿದ ಸಂವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ತಮ್ಮ ಮಗಳು ರಾಹಾ ಕಪೂರ್‌ಳನ್ನು ಉತ್ತಮವಾಗಿ ಬೆಳೆಸುವ ಬಗ್ಗೆ ಆಲಿಯಾ ಕೇಳಿದ ಪ್ರಶ್ನೆಗೆ ಸದ್ಗುರು ನೀಡಿದ ಮಾರ್ಮಿಕ ಉತ್ತರವೇ ಇದಕ್ಕೆ ಕಾರಣ.
ಚೆನ್ನೈನ ಲೀಲಾ ಪ್ಯಾಲೇಸ್‌ನಲ್ಲಿ ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಶನ್ ಹಮ್ಮಿಕೊಂಡಿದ್ದ ಸಂವಾದದಲ್ಲಿ ಅಲಿಯಾ ಭಟ್ ಪಾಲ್ಗೊಂಡಿದ್ದರು. ಈ ವೇಳೆ ಅವರು ಸದ್ಗುರುಗಳ ಬಳಿ, “ನಾನು ನನ್ನ ಮಗಳಿಗೆ ಒಬ್ಬ ಉತ್ತಮ ತಾಯಿಯಾಗಿದ್ದೇನೆಯೇ ಎಂದು ತಿಳಿಯುವುದು ಹೇಗೆ? ಪೋಷಕರಿಗೆ ಮಕ್ಕಳ ಬಗ್ಗೆ ಚಿಂತೆ ಇರುವುದು ಸಹಜವಲ್ಲವೇ?” ಎಂದು ಪ್ರಶ್ನಿಸಿದರು.

ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸದ್ಗುರುಗಳು, “ಯಾವ ಪೋಷಕರು ಸದಾ ಆತಂಕ ಅಥವಾ ಚಿಂತೆಯಲ್ಲಿ ಇರುತ್ತಾರೋ, ಅವರು ಎಂದಿಗೂ ಉತ್ತಮ ಪೋಷಕರಾಗಲು ಸಾಧ್ಯವಿಲ್ಲ” ಎಂದು ನೇರವಾಗಿ ಹೇಳಿದರು. ಸದ್ಗುರುಗಳ ಈ ಚುಟುಕಾದ ಉತ್ತರ ಸಭೆಯಲ್ಲಿದ್ದವರಲ್ಲಿ ನಗೆ ಉಕ್ಕಿಸಿದರೂ, ಪೋಷಕತ್ವದ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿತು.
ಆಂತರಿಕ ಸಮತೋಲನದ ಪಾಠ
ಸಂಭಾಷಣೆಯನ್ನು ಮುಂದುವರಿಸುತ್ತಾ ಸದ್ಗುರುಗಳು ಮಾನಸಿಕ ಸ್ಥಿರತೆಯ ಬಗ್ಗೆ ಮಾತನಾಡಿದರು. “ನಾನು ನನ್ನನ್ನು ರಿಲ್ಯಾಕ್ಸ್ ಮಾಡಿಕೊಳ್ಳಲು ಯಾವುದೇ ವಿಶೇಷ ಕಸರತ್ತು ಮಾಡುವುದಿಲ್ಲ, ಏಕೆಂದರೆ ನಾನು ನನ್ನನ್ನು ಎಂದಿಗೂ ಒತ್ತಡಕ್ಕೆ ಸಿಲುಕಿಸಿಕೊಳ್ಳುವುದಿಲ್ಲ” ಎಂದು ಹೇಳುವ ಮೂಲಕ ಭಾವನಾತ್ಮಕ ಸಮತೋಲನದ ಮಹತ್ವವನ್ನು ವಿವರಿಸಿದರು. ಮಕ್ಕಳನ್ನು ಬೆಳೆಸುವಾಗ ಪೋಷಕರು ತಮ್ಮ ಮನಸ್ಥಿತಿಯನ್ನು ಹೇಗೆ ಸ್ಥಿರವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ ಅವರ ಮಾತುಗಳು ನೆರೆದಿದ್ದವರ ಗಮನ ಸೆಳೆದವು.
2022ರಲ್ಲಿ ನಟ ರಣಬೀರ್ ಕಪೂರ್ ಅವರನ್ನು ವಿವಾಹವಾದ ಆಲಿಯಾ ಭಟ್, ಅದೇ ವರ್ಷದ ನವೆಂಬರ್‌ನಲ್ಲಿ ಮಗಳು ರಾಹಾಗೆ ಜನ್ಮ ನೀಡಿದ್ದರು. ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳ ಖಾಸಗಿತನದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಿರುವ ಅಲಿಯಾ, ಈ ಸಂವಾದದಲ್ಲಿ ಒಬ್ಬ ಸಾಮಾನ್ಯ ತಾಯಿಯಾಗಿ ತಮ್ಮ ಆತಂಕಗಳನ್ನು ಹಂಚಿಕೊಂಡರು. ವೃತ್ತಿಜೀವನದ ವಿಷಯಕ್ಕೆ ಬಂದರೆ, ಅಲಿಯಾ ಅವರು ಇತ್ತೀಚೆಗೆ ‘ಜಿಗ್ರಾ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ‘ಆಲ್ಫಾ’ ಮತ್ತು ‘ಲವ್ ಅಂಡ್ ವಾರ್’ ಚಿತ್ರಗಳಲ್ಲಿ ನಟಿಸುತ್ತಿದ್ದು, ವಿಕ್ಕಿ ಕೌಶಲ್ ಮತ್ತು ಬಾಬಿ ಡಿಯೋಲ್ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.
ಇದನ್ನೂ ಓದಿ : ಪಶ್ಚಿಮ ಪಾಲಿಕೆ ಅಭಿವೃದ್ಧಿಗೆ ಮುನ್ಸಿಪಲ್ ಬಾಂಡ್ ಮೊರೆ – 4732.72 ಕೋಟಿ ಬಜೆಟ್ ಮಂಡನೆ



















