ಕಲಬುರಗಿ : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ವೋಟ್ ಚೋರಿ ಪ್ರಕರಣ ಸಂಬಂಧ ಇಂದು SIT ಅಧಿಕಾರಿಗಳು ನಗರದ ಐದು ಕಡೆ ದಾಳಿ ನಡೆಸಿದ್ದಾರೆ. ಸದ್ಯ SIT 20ರಿಂದ 25 ಅಧಿಕಾಎರಿಗಳು ಹಲವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆಳಂದ್ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎಂದು ಶಾಸಕ ಬಿ.ಆರ್ ಪಾಟೀಲ್ ಆರೋಪಿಸಿದ್ದರು. ಈ ವಿಚಾರವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಪ್ರಸ್ತಾಪಿಸುವ ಮೂಲಕ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಆ ಬಳಿಕ ರಾಜ್ಯ ಸರ್ಕಾರ ಈ ಪ್ರಕರಣದ ತನಿಖೆಗೆ ಎಸ್ಐಟಿ ರಚಿಸಿ ಆದೇಶಿಸಿತ್ತು. ಹೀಗಾಗಿ ಕಳೆದ ಕೆಲ ದಿನಗಳಿಂದ ಕಲಬುರಗಿ ನಗರದಲ್ಲಿ ಬೀಡು ಬಿಟ್ಟಿದ್ದ ಎಸ್ಐಟಿ, ಇದೀಗ ಐದು ಕಡೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.