ಬೆಂಗಳೂರು: ಇದೇನಿದ್ದರೂ ಕ್ವಿಕ್ ಕಾಮರ್ಸ್ ಕಾಲ. ದಿನಸಿಯಿಂದ ಹಿಡಿದು ಮೊಬೈಲ್, ಲ್ಯಾಪ್ ಟಾಪ್ ವರೆಗೆ ಮನೆ ಬಾಗಿಲಿಗೇ ಎಲ್ಲ ವಸ್ತುಗಳನ್ನು ಆನ್ ಲೈನ್ ಮೂಲಕ ಕೇವಲ 10 ನಿಮಿಷದಲ್ಲಿ ತರಿಸಿಕೊಳ್ಳಬಹುದು. ಹೀಗೆ ಹೋಮ್ ಡೆಲಿವರಿ ಸೇವೆಯು ಈಗ ಸಿಮ್ ಕಾರ್ಡ್ ಗೂ ಅನ್ವಯವಾಗಿದೆ. ಹೌದು, ಏರ್ ಟೆಲ್ ಹಾಗೂ ಬ್ಲಿಂಕ್ ಇಟ್ ಈ ದಿಸೆಯಲ್ಲಿ ಪಾರ್ಟ್ ನರ್ ಗಳಾಗಿದ್ದು, ಕೇವಲ 49 ರೂ. ಪಾವತಿಸಿ ಬ್ಲಿಂಕ್ ಇಟ್ ಮೂಲಕ ಏರ್ ಟೆಲ್ ಸಿಮ್ ಕಾರ್ಡ್ಅನ್ನು ಮನೆ ಬಾಗಿಲಿಗೇ ತರಿಸಿಕೊಳ್ಳಬಹುದಾಗಿದೆ.
ಗ್ರಾಹಕರು ಸುಲಭವಾಗಿ ಸಿಮ್ ಕಾರ್ಡ್ ಖರೀದಿಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಈಗ ಬ್ಲಿಂಕಿಟ್ ನಲ್ಲಿ ಗ್ರಾಹಕರು ಕೇವಲ 49 ರೂ. ಪಾವತಿಸಿ ಸಿಮ್ ಖರೀದಿಸಬಹುದು. ಏರ್ ಟೆಲ್ ಥ್ಯಾಂಕ್ಸ್ ಅಪ್ಲಿಕೇಶನ್ ಅಥವಾ ನೇರವಾಗಿ ಗ್ರಾಹಕಸೇವೆ ಸಂಖ್ಯೆ 9810012345 ಮೂಲಕ ಸಂಪರ್ಕ ಸಾಧಿಸಬಹುದು. ಆ್ಯಕ್ಟಿವೇಟ್ ಮಾಡಿಕೊಂಡ ನಂತರ ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ ಆಯ್ಕೆ ಮಾಡಿಕೊಳ್ಳಬಹುದು.
ಆರಂಭಿಕ ಹಂತದಲ್ಲಿ ದೇಶದ 16 ನಗರಗಳಲ್ಲಿ ಈ ಸೇವೆ ಲಭ್ಯವಿದೆ. ಮುಂಬೈ, ದೆಹಲಿ, ಗುರುಗ್ರಾಮ, ಫರೀದಾಬಾದ್, ಸೋನೆಪತ್, ಅಹಮದಾಬಾದ್, ಸೂರತ್, ಚೆನ್ನೈ, ಭೋಪಾಲ್, ಇಂದೋರ್, ಬೆಂಗಳೂರು, ಪುಣೆ, ಲಖನೌ, ಜೈಪುರ, ಕೋಲ್ಕತ್ತಾ ಮತ್ತು ಹೈದರಾಬಾದ್ ನಗರಗಳಲ್ಲಿ ಆರಂಭಿಕ ಹಂತದಲ್ಲಿ ಸೇವೆ ಲಭ್ಯ ಇದೆ.
ಆ್ಯಕ್ಟಿವೇಟ್ ಮಾಡಿಕೊಳ್ಳುವುದು ಹೇಗೆ?
ಮನೆಗೆ ಸಿಮ್ ಕಾರ್ಡ್ ತಲುಪಿದ ನಂತರ, ಗ್ರಾಹಕರು ತಮ್ಮ ಆಧಾರ್ ಆಧಾರಿತ ಕೆವೈಸಿ ಪ್ರಕ್ರಿಯೆ ಮೂಲಕ ಸರಳವಾಗಿ ಸಿಮ್ ಅನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದು. ಇದನ್ನು ಗ್ರಾಹಕರು ತಮ್ಮ ನೆರವಿನೊಂದಿಗೆ ಆನ್ ಲೈನ್ ಮಾರ್ಗದರ್ಶನದಿಂದ ಕೂಡ ಪ್ರಕ್ರಿಯೆ ಮುಗಿಸಿಕೊಳ್ಳಬಹುದು. ಸಿಮ್ ಪಡೆದ ನಂತರ ಅದನ್ನು ಸಕ್ರಿಯಗೊಳಿಸಲು 15 ದಿನಗಳ ಗಡುವು ನೀಡಲಾಗಿದೆ.