ಲಖನೌ: ಉತ್ತರ ಪ್ರದೇಶದ ಲಖನೌ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಏರ್ ಇಂಡಿಯಾ (Air India) ವಿಮಾನದಲ್ಲಿ ಪ್ರಯಾಣಿಕರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ದೆಹಲಿಯಲ್ಲಿ ಏರ್ ಇಂಡಿಯಾದ ಎಐ2845 ವಿಮಾನವನ್ನು ಪ್ರಯಾಣಿಕ ಹತ್ತಿದ್ದಾರೆ. ವಿಮಾನವು ಲಖನೌ ಏರ್ ಪೋರ್ಟ್ ನಲ್ಲಿ ಲ್ಯಾಂಡ್ ಆಗಿದ್ದು, ಸಿಬ್ಬಂದಿ ತಪಾಸಣೆ ಮಾಡಿ ನೋಡಿದಾಗ ಪ್ರಯಾಣಿಕ ಮೃತಪಟ್ಟಿರುವುದು ದೃಢವಾಗಿದೆ. ಮೃತರನ್ನು ಆಸಿಫುಲ್ಲಾ ಅನ್ಸಾರಿ ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ 8.10 ನಿಮಿಷಕ್ಕೆ ಲಖನೌನಲ್ಲಿರುವ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಎಲ್ಲ ಪ್ರಯಾಣಿಕರು ವಿಮಾನದಿಂದ ಇಳಿದಿದ್ದಾರೆ. ಆಸಿಫುಲ್ಲಾ ಅನ್ಸಾರಿ ಅವರು ಎದ್ದು ಬರದ ಕಾರಣ ಸಿಬ್ಬಂದಿಯು ಹೋಗಿ ಪರಿಶೀಲನೆ ಮಾಡಿದ್ದಾರೆ. ಆಸಿಫುಲ್ಲಾ ಅನ್ಸಾರಿ ಅವರು ಎದ್ದೇಳದ ಕಾರಣ ವೈದ್ಯರನ್ನು ಕರೆಸಿದ್ದಾರೆ.
ವೈದ್ಯರು ತಪಾಸಣೆ ನಡೆಸಿ, ಪ್ರಯಾಣಿಕ ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಆಸಿಫುಲ್ಲಾ ಅನ್ಸಾರಿ ಅವರು ಸೀಟ್ ಬೆಲ್ಟ್ ಧರಿಸಿರಿಲಿಲ್ಲ. ಹಾಗಾಗಿ ಇವರು ಮಾರ್ಗ ಮಧ್ಯೆಯೇ ಮೃತಪಟ್ಟಿರಬಹುದು ಎಂದು ವೈದ್ಯರು ಅಂದಾಜಿಸಿದ್ದಾರೆ.
ಸಾವಿಗೆ ಕಾರಣವೇನು?
ಪ್ರಾಥಮಿಕ ವರದಿಗಳ ಪ್ರಕಾರ, ಆಸಿಫುಲ್ಲಾ ಅನ್ಸಾರಿ ಅವರಿಗೆ ಹೃದಯಸ್ತಂಭನ ಉಂಟಾಗಿರಬಹುದು. ಇದರಿಂದಾಗಿಯೇ ಅವರು ವಿಮಾನದಲ್ಲಿ ಕುಳಿತಲ್ಲಿಯೇ ಉಸಿರು ಚೆಲ್ಲಿರಬಹುದು ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೋಸ್ಟ್ ಮಾಸ್ಟಮ್ ವರದಿ ಬಂದ ಬಳಿಕವೇ ಸಾವಿಗೆ ನಿಖರ ಕಾರಣ ದೊರೆಯಲಿದೆ.