ನವದೆಹಲಿ: ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ಮರಳಿ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಇಂಜಿನ್‌ನಲ್ಲಿನ ತೈಲ ಒತ್ತಡ (Oil Pressure) ದಿಢೀರನೆ ಶೂನ್ಯಕ್ಕೆ ಇಳಿದ ಕಾರಣ ಪೈಲಟ್‌ಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ,
ಸೋಮವಾರ ಮುಂಜಾನೆ 3:20ಕ್ಕೆ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಎಐ887 ವಿಮಾನದಲ್ಲಿ ಈ ಘಟನೆ ಸಂಭವಿಸಿದೆ. ಬೋಯಿಂಗ್ 777-337 ER ಮಾದರಿಯ ಈ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಸಮಯದಲ್ಲಿ, ಬಲಬದಿಯ ಇಂಜಿನ್‌ನಲ್ಲಿ ತೈಲ ಒತ್ತಡ ತೀವ್ರವಾಗಿ ಕುಸಿಯುತ್ತಿರುವುದನ್ನು ಪೈಲಟ್‌ಗಳು ಗಮನಿಸಿದರು. ತಕ್ಷಣವೇ ಎಚ್ಚೆತ್ತ ಸಿಬ್ಬಂದಿ ಸುರಕ್ಷತಾ ನಿಯಮಗಳನ್ವಯ ವಿಮಾನವನ್ನು ಮರಳಿ ದೆಹಲಿಗೆ ಕೊಂಡೊಯ್ದು ಸುರಕ್ಷಿತವಾಗಿ ಇಳಿಸಿದ್ದಾರೆ.
ಪ್ರಯಾಣಿಕರು ಸುರಕ್ಷಿತ:
ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗದವರು ಸುರಕ್ಷಿತವಾಗಿದ್ದು, ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಪರ್ಯಾಯ ವಿಮಾನದ ಮೂಲಕ ಪ್ರಯಾಣಿಕರನ್ನು ಮುಂಬೈಗೆ ಕಳುಹಿಸಲು ಏರ್ ಇಂಡಿಯಾ ವ್ಯವಸ್ಥೆ ಮಾಡಿದೆ.
ಈ ಗಂಭೀರ ತಾಂತ್ರಿಕ ದೋಷದ ಕುರಿತು ನಾಗರಿಕ ವಿಮಾನಯಾನ ಸಚಿವಾಲಯವು ಕಳವಳ ವ್ಯಕ್ತಪಡಿಸಿದ್ದು, ಸಮಗ್ರ ವರದಿ ನೀಡುವಂತೆ ಏರ್ ಇಂಡಿಯಾಗೆ ಸೂಚಿಸಿದೆ. ಅಲ್ಲದೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಈ ಬಗ್ಗೆ ತನಿಖೆ ನಡೆಸಲಿದೆ ಎಂದು ಸಚಿವಾಲಯ ತಿಳಿಸಿದೆ.
ಸತತ ತಾಂತ್ರಿಕ ದೋಷಗಳು:
ಕಳೆದ ಕೆಲವೇ ದಿನಗಳ ಹಿಂದೆ ವಿಜಯವಾಡದ ಗನ್ನವರಂ ವಿಮಾನ ನಿಲ್ದಾಣದಲ್ಲಿ ವಿಶಾಖಪಟ್ಟಣಕ್ಕೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲೂ ಇಂಜಿನ್ ದೋಷ ಕಾಣಿಸಿಕೊಂಡಿತ್ತು. ಆ ವಿಮಾನದಲ್ಲಿ ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಹಲವು ಗಣ್ಯರಿದ್ದರು. ಸತತವಾಗಿ ನಡೆಯುತ್ತಿರುವ ಇಂತಹ ಘಟನೆಗಳು ವಿಮಾನಗಳ ನಿರ್ವಹಣೆ ಮತ್ತು ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಎಬ್ಬಿಸಿವೆ.
ಇದನ್ನೂ ಓದಿ: ಭಾರತ-ನ್ಯೂಜಿಲೆಂಡ್ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ : 5 ವರ್ಷಗಳಲ್ಲಿ ವಹಿವಾಟು ದ್ವಿಗುಣಗೊಳಿಸುವ ಗುರಿ



















