ಅಹಮದಾಬಾದ್: ಕಳೆದ ತಿಂಗಳು ಜೂನ್ 12 ರಂದು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾದ ಎಐ-171 ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಪತನ ದುರಂತಕ್ಕೆ ಸಂಬಂಧಿಸಿದಂತೆ ಭಾರತದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದೆ. ಈ ವರದಿಯು ದುರಂತಕ್ಕೆ ಸಂಬಂಧಿಸಿದ ಹಲವು ಆಘಾತಕಾರಿ ಅಂಶಗಳನ್ನು ಬಹಿರಂಗಪಡಿಸಿದ್ದು, ವಿಮಾನದಲ್ಲಿ ಯಾವುದೇ ಯಾಂತ್ರಿಕ ದೋಷವಿರಲಿಲ್ಲ, ಬದಲಿಗೆ ಟೇಕ್-ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಎಂಜಿನ್‌ಗಳಿಗೆ ಇಂಧನ ಪೂರೈಕೆಯನ್ನು ನಿಲ್ಲಿಸಿದ್ದೇ ದುರಂತಕ್ಕೆ ಕಾರಣ ಎಂದು ಹೇಳಿದೆ.
ವರದಿಯ ಪ್ರಮುಖಾಂಶಗಳು:
ಜುಲೈ 8, 2025ರಂದು ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ವಿಮಾನ ಅಪಘಾತ ತನಿಖಾ ಸಂಸ್ಥೆ ಪ್ರಾಥಮಿಕ ವರದಿಯನ್ನು ಸಲ್ಲಿಸಿದ್ದು, ವಿಮಾನದ ಕಾಕ್‌ಪಿಟ್ ಧ್ವನಿ ರೆಕಾರ್ಡರ್ (CVR) ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ (FDR) ನಿಂದ ಪಡೆದ ಮಾಹಿತಿ ಆಧರಿಸಿ, ಈ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಇಂಧನ ಸ್ವಿಚ್‌ಗಳ ಕಾರ್ಯಾಚರಣೆ:
ವಿಮಾನ ಟೇಕ್-ಆಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಕಾಕ್‌ಪಿಟ್‌ನಲ್ಲಿರುವ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು “ರನ್” ಸ್ಥಾನದಿಂದ “ಕಟ್‌ಆಫ್” ಸ್ಥಾನಕ್ಕೆ ಬದಲಾಯಿಸಲಾಗಿತ್ತು ಎಂದು ವರದಿ ತಿಳಿಸಿದೆ.
ಪೈಲಟ್‌ಗಳ ನಡುವಿನ ಗೊಂದಲ:
ಸಿವಿಆರ್ ನಲ್ಲಿ ದಾಖಲಾಗಿರುವ ಸಂಭಾಷಣೆಯು ಈ ದುರಂತಕ್ಕೆ ಹೊಸ ತಿರುವು ನೀಡಿದೆ. ಒಬ್ಬ ಪೈಲಟ್ ಇನ್ನೊಬ್ಬ ಪೈಲಟ್‌ಗೆ, “ನೀವು ಇಂಧನ ಪೂರೈಕೆಯನ್ನು ಕಟ್ ಮಾಡಿದ್ದೇಕೆ?” ಎಂದು ಪ್ರಶ್ನಿಸಿದರೆ, ಅದಕ್ಕೆ ಇನ್ನೊಬ್ಬ ಪೈಲಟ್, “ನಾನು ಕಟ್ ಮಾಡಿಲ್ಲ” ಎಂದು ಉತ್ತರಿಸಿದ್ದಾರೆ. ಈ ಸಂಭಾಷಣೆಯು ಪೈಲಟ್‌ಗಳ ನಡುವೆ ಗೊಂದಲವಿತ್ತು ಎಂಬುದನ್ನು ಸ್ಪಷ್ಟಪಡಿಸಿದೆ.

ಯಾಂತ್ರಿಕ ದೋಷದ ಕೊರತೆ:
ಪ್ರಾಥಮಿಕ ವರದಿಯು ವಿಮಾನದಲ್ಲಿ ಯಾವುದೇ ಯಾಂತ್ರಿಕ ದೋಷ ಅಥವಾ ವಿನ್ಯಾಸದ ದೋಷವಿರಲಿಲ್ಲ ಎಂದು ದೃಢಪಡಿಸಿದೆ. ಟೇಕ್-ಆಫ್ ಸಮಯದಲ್ಲಿ ಎಂಜಿನ್‌ಗಳು ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದವು, ಆದರೆ ಇಂಧನ ಸ್ವಿಚ್‌ಗಳನ್ನು ಕಟ್‌ಆಫ್ ಮಾಡಿದ್ದರಿಂದ ಎಂಜಿನ್‌ಗಳು ಏಕಾಏಕಿ ಸ್ಥಗಿತಗೊಂಡಿವೆ. ಪಕ್ಷಿಗಳ ಡಿಕ್ಕಿಯಂತಹ ಯಾವುದೇ ಬಾಹ್ಯ ಕಾರಣಗಳನ್ನು ಕೂಡ ವರದಿ ತಳ್ಳಿಹಾಕಿದೆ.
ಪೈಲಟ್‌ಗಳ ಕಾರ್ಯಾಚರಣೆಯ ಮೇಲೆ ಕೇಂದ್ರೀಕರಣ:
ತನಿಖೆಯು ಪ್ರಮುಖವಾಗಿ ಪೈಲಟ್‌ಗಳ ಕಾರ್ಯಾಚರಣೆಯ ಮೇಲೆ ಕೇಂದ್ರೀಕರಿಸಿದೆ. ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ಆಕಸ್ಮಿಕವಾಗಿ ಚಲಿಸದಂತೆ ಲಾಕ್ ಮಾಡುವ ವ್ಯವಸ್ಥೆಯನ್ನು ವಿಮಾನ ಹೊಂದಿವೆ. ಒಬ್ಬ ಪೈಲಟ್ ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಸ್ವಿಚ್ ಅನ್ನು ಎತ್ತಿ, ಅದನ್ನು ಆಫ್ ಮಾಡಿರಬಹುದು ಎಂದು ಅಂದಾಜಿಸಲಾಗಿದೆ.
“ಮೇಡೇ” ಕರೆ:
ಎಂಜಿನ್‌ಗಳು ನಿಂತ ನಂತರ, ಪೈಲಟ್‌ಗಳು ತಕ್ಷಣ “ಮೇಡೇ ಮೇಡೇ ಮೇಡೇ” ಎಂದು ತುರ್ತು ಕರೆಯನ್ನು ಮಾಡಿದ್ದಾರೆ. ಆದರೆ, ಏರ್ ಟ್ರಾಫಿಕ್ ಕಂಟ್ರೋಲ್ (ATC) ಪ್ರತಿಕ್ರಿಯಿಸುವ ಮೊದಲೇ ವಿಮಾನವು ಪತನಗೊಂಡಿದೆ.
ಬ್ಲಾಕ್ ಬಾಕ್ಸ್ ಡೇಟಾ:
ವಿಮಾನದ ಕಾಕ್‌ಪಿಟ್ ಧ್ವನಿ ರೆಕಾರ್ಡರ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್‌ನಿಂದ ಡೇಟಾವನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದ್ದು, ಇದು ತನಿಖೆಗೆ ಪ್ರಮುಖ ಆಧಾರವಾಗಿದೆ ಎಂದು ತನಿಖಾ ಬ್ಯೂರೋ ತಿಳಿಸಿದೆ.
ಅಂದು ಆಗಿದ್ದೇನು?:
ಜೂನ್ 12, 2025 ರಂದು ಮಧ್ಯಾಹ್ನ 1:39 ಕ್ಕೆ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಏರಿಂಡಿಯಾ ವಿಮಾನವು ಟೇಕ್-ಆಫ್ ಆಗಿತ್ತು. 10 ಗಂಟೆಗಳ ಲಂಡನ್ ಪ್ರಯಾಣಕ್ಕೆ ಸಿದ್ಧವಾಗಿದ್ದ ವಿಮಾನದಲ್ಲಿ 1.25 ಲಕ್ಷ ಲೀಟರ್ ಇಂಧನವಿತ್ತು. ಆದರೆ, ಟೇಕ್-ಆಫ್ ಆದ 30-35 ಸೆಕೆಂಡ್‌ಗಳಲ್ಲಿ ವಿಮಾನವು ಮೇಲಕ್ಕೇರದೆ ಇಳಿಮುಖವಾಗಿ ಸಾಗಿ, ಸಮೀಪದ ಬಿಜೆ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳ ಹಾಸ್ಟೆಲ್ ಕಟ್ಟಡಕ್ಕೆ ಅಪ್ಪಳಿಸಿ ಸ್ಫೋಟಗೊಂಡಿತು. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿ ಹಾಗೂ ನೆಲದ ಮೇಲಿದ್ದ 19 ಜನ ಸೇರಿದಂತೆ 260ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಪವಾಡಸದೃಶವಾಗಿ ಒಬ್ಬ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ. ಈಗ ಅಪರಾಧ ತನಿಖಾ ಬ್ಯೂರೋದ ಪ್ರಾಥಮಿಕ ತನಿಖಾ ವರದಿಯು ದುರಂತದ ಕುರಿತ ಅಚ್ಚರಿಯ ಅಂಶಗಳನ್ನು ಹೊರಹಾಕಿದೆ.



















