ನವದೆಹಲಿ : ರಾಷ್ಟ್ರ ರಾಜಧಾನಿ ದೆಹಲಿ ಏರ್ಪೋರ್ಟ್ನ ಟರ್ಮಿನಲ್ 3ರಲ್ಲಿ ಭಾರೀ ಅಗ್ನಿ ಅವಘಡವೊಂದು ನಡೆದಿದೆ. ಏರ್ ಇಂಡಿಯಾ ವಿಮಾನದಿಂದ ಕೆಲವೇ ಮೀಟರ್ ದೂರದಲ್ಲಿ ನಿಂತಿದ್ದ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕೂಡಲೇ ಬಸ್ ಧಗಧಗನೆ ಹೊತ್ತಿ ಉರಿದಿದೆ.
SATS ಏರ್‌ಪೋರ್ಟ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್‌ನಿಂದ ನಿರ್ವಹಿಸಲ್ಪಡುವ ಬಸ್ ಬೇ 32ರ ಬಳಿ ನಿಂತಿದ್ದಾಗ ಬೆಂಕಿ ಹೊತ್ತಿಕೊಂಡಿದೆ. ನೋಡ ನೋಡುತ್ತಿದ್ದಂತೆ ಬಸ್ ಸುಟ್ಟು ಭಸ್ಮವಾಗಿದೆ.

ಬೆಂಕಿಯ ಕೆನ್ನಾಲಿಗೆ ವಿಮಾನಕ್ಕೆ ತಾಗಿದ್ದರೆ ದೊಡ್ಡ ಅನಾಹುತ ಎದುರಾಗುವ ಸಾಧ್ಯತೆಯಿತ್ತು. ಆದರೆ, ಅದೃಷ್ಟವಶಾತ್ ಬೆಂಕಿಯ ಕಿಡಿ ವಿಮಾನಕ್ಕೆ ತಾಗಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋಗಳು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಬಸ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಕೂಡಲೇ ಕಾರ್ಯ ಪ್ರವೃತ್ತರಾದ ನಮ್ಮ ತಜ್ಞ ಎಆರ್‌ಎಫ್‌ಎಫ್ ತಂಡ ಕೆಲವೇ ನಿಮಿಷಗಳಲ್ಲಿ ಬೆಂಕಿಯನ್ನು ನಂದಿಸಿದೆ. ಘಟನೆಯಲ್ಲಿ ಯಾವುದೇ ಅನಾಹುತ ಆಗಿಲ್ಲ, ಯಾರಿಗೂ ಗಾಯಗಳಾಗಿಲ್ಲ ಎಂದು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐಎ) ಕಾರ್ಯಾಚರಣೆಯನ್ನು ನಿರ್ವಹಿಸುವ ದೆಹಲಿ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (DIAL) ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದೆ.
ಇದನ್ನೂ ಓದಿ : ನವದೆಹಲಿ| ಹದಗೆಟ್ಟಿದ ವಾಯು ಗುಣಮಟ್ಟ; ಮೋಡ ಬಿತ್ತನೆ ಕಾರ್ಯ ಶುರು


















