ಚೆನ್ನೈ : ತಮಿಳುನಾಡು ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜಕೀಯ ಕಾವು ಏರತೊಡಗಿದ್ದು, ರಾಜ್ಯದ ಪ್ರಮುಖ ಪ್ರತಿಪಕ್ಷ ಎಐಎಡಿಎಂಕೆ (AIADMK) ಬುಧವಾರ ತನ್ನ 23 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಿದೆ. ಏಪ್ರಿಲ್ 23 ರಂದು ನಡೆಯಲಿರುವ ಈ ಹೈವೋಲ್ಟೇಜ್ ಸಮರಕ್ಕೆ ಪಕ್ಷದ ಸಾರಥ್ಯ ವಹಿಸಿರುವ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (EPS) ಅವರು ತಮ್ಮ ಭದ್ರಕೋಟೆಯಾದ ‘ಎಡಪ್ಪಾಡಿ’ ಕ್ಷೇತ್ರದಿಂದಲೇ ಮತ್ತೆ ಕಣಕ್ಕಿಳಿಯಲಿದ್ದಾರೆ.
ಹಿರಿಯ ನಾಯಕರಿಗೆ ಮಣೆ:
ಮೊದಲ ಪಟ್ಟಿಯಲ್ಲಿ ಅನುಭವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹಿರಿಯ ನಾಯಕರನ್ನು ಅವರ ಹಾಲಿ ಕ್ಷೇತ್ರಗಳಲ್ಲೇ ಉಳಿಸಿಕೊಳ್ಳಲಾಗಿದೆ. ಕೆ.ಪಿ. ಮುನುಸಾಮಿ, ದಿಂಡಿಗಲ್ ಸಿ. ಶ್ರೀನಿವಾಸನ್ ಮತ್ತು ನಾಥಮ್ ಆರ್. ವಿಶ್ವನಾಥನ್ ಅವರಂತಹ ಪ್ರಭಾವಿಗಳಿಗೆ ಟಿಕೆಟ್ ಖಚಿತವಾಗಿದೆ. ಇನ್ನು ಪಶ್ಚಿಮ ತಮಿಳುನಾಡಿನ ಪ್ರಬಲ ನಾಯಕರಾದ ಎಸ್.ಪಿ. ವೇಲುಮಣಿ (ತೊಂಡಮುತ್ತೂರು) ಮತ್ತು ಪಿ. ತಂಗಮಣಿ (ಕುಮಾರಪಾಳ್ಯಂ) ಅವರಿಗೂ ಸ್ಥಾನ ನೀಡಲಾಗಿದ್ದು, ಆ ಮೂಲಕ ತನ್ನ ಸಾಂಪ್ರದಾಯಿಕ ಮತಬ್ಯಾಂಕ್ ಉಳಿಸಿಕೊಳ್ಳಲು ಪಕ್ಷ ತಂತ್ರ ರೂಪಿಸಿದೆ. ಚೆನ್ನೈನ ರಾಯಪುರಂನಿಂದ ಮಾಜಿ ಸಚಿವ ಡಿ. ಜಯಕುಮಾರ್ ಅವರು ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ.
ಎನ್‌ಡಿಎ ಮೈತ್ರಿಕೂಟದ ಸೀಟು ಹಂಚಿಕೆ ಅಂತಿಮ
ಚುನಾವಣಾ ಪೂರ್ವ ಮೈತ್ರಿಯನ್ನು ಅಂತಿಮಗೊಳಿಸಿರುವ ಎಐಎಡಿಎಂಕೆ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟವು ಸೀಟು ಹಂಚಿಕೆಯನ್ನು ಪೂರ್ಣಗೊಳಿಸಿದೆ. ಒಟ್ಟು 234 ಕ್ಷೇತ್ರಗಳ ಪೈಕಿ ಎಐಎಡಿಎಂಕೆ ಅತೀ ದೊಡ್ಡ ಪಕ್ಷವಾಗಿ 178 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಮೈತ್ರಿ ಧರ್ಮದಂತೆ ಬಿಜೆಪಿಗೆ 27 ಸ್ಥಾನಗಳನ್ನು ಬಿಟ್ಟುಕೊಡಲಾಗಿದ್ದು, ಅನ್ಬುಮಣಿ ರಾಮದಾಸ್ ನೇತೃತ್ವದ ಪಿಎಂಕೆ (PMK) 18 ಮತ್ತು ಟಿಟಿವಿ ದಿನಕರನ್ ನೇತೃತ್ವದ ಎಎಂಎಂಕೆಗೆ 11 ಸ್ಥಾನಗಳನ್ನು ನಿಗದಿಪಡಿಸಲಾಗಿದೆ. ತಮಿಳು ಮಾನಿಲ ಕಾಂಗ್ರೆಸ್ ಮತ್ತು ಐಜೆಕೆ ಪಕ್ಷಗಳೂ ಈ ಮೈತ್ರಿಯ ಭಾಗವಾಗಿವೆ.
210 ಸ್ಥಾನಗಳ ಗೆಲುವಿನ ಗುರಿ
ಸೀಟು ಹಂಚಿಕೆಯ ಬಳಿಕ ಆತ್ಮವಿಶ್ವಾಸದಿಂದ ಮಾತನಾಡಿರುವ ಎಡಪ್ಪಾಡಿ ಪಳನಿಸ್ವಾಮಿ ಅವರು, ರಾಜ್ಯದಲ್ಲಿ ಈ ಬಾರಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. 234 ಕ್ಷೇತ್ರಗಳ ಪೈಕಿ ಕನಿಷ್ಠ 210 ಸ್ಥಾನಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2021ರ ಚುನಾವಣೆಯಲ್ಲಿ ಬಿಜೆಪಿ 4 ಮತ್ತು ಪಿಎಂಕೆ 5 ಸ್ಥಾನಗಳನ್ನು ಗೆದ್ದಿದ್ದವು. ಈ ಬಾರಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಪಳನಿಸ್ವಾಮಿ ಪಡೆ ಸನ್ನದ್ಧವಾಗಿದೆ.
ಇದನ್ನೂ ಓದಿ : ಹೊಟೇಲ್‌ಗಳ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ.. ಗೃಹ ಬಳಕೆ ಗ್ಯಾಸ್ ಸಿಲಿಂಡರ್‌ಗಳ ವಶ



















