ಬೆಂಗಳೂರು: ಕೃತಕ ಬುದ್ಧಿಮತ್ತೆ ತಂತ್ರಜ್ಞಾನವೀಗ ಭಾರತ ಸೇರಿ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಮಾಹಿತಿ ತಂತ್ರಜ್ಞಾನ ಸೇರಿ ಹಲವು ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಇಚ್ಛಿಸುವವರು ಎಐ ಬಗ್ಗೆ ಜ್ಞಾನ, ತರಬೇತಿ ಪಡೆದಿರಬೇಕಾದುದು ಅತ್ಯವಶ್ಯಕವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡಿರುವ ರಾಜ್ಯ ಸರ್ಕಾರವು ಉಚಿತವಾಗಿ ಎಐ ತರಬೇತಿ (AI Training) ನೀಡಲು ಮುಂದಾಗಿದೆ. ಉಚಿತವಾಗಿ ತರಬೇತಿ ನೀಡುವ ಜತೆಗೆ ಮಾಸಿಕ 15 ಸಾವಿರ ರೂಪಾಯಿ ಸ್ಟೈಪೆಂಡ್ ಕೂಡ ನೀಡುವುದಾಗಿ ಘೋಷಿಸಿದೆ.
ಹೌದು, ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಐಐಎಸ್ ಸಿ, ಐಐಟಿ ಮತ್ತು ಎನ್ಐಟಿ ಸಂಸ್ಥೆಗಳ ಮೂಲಕ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮಷಿನ್ ಲರ್ನಿಂಗ್ ಸೇರಿ ವಿವಿಧ ವೃತ್ತಿಪರ ತರಬೇತಿ ಕೋರ್ಸ್ಗಳನ್ನು ಪ್ರಾರಂಭಿಸಲಾಗುತ್ತಿದ್ದು, ಪರಿಶಿಷ್ಟ ಪಂಗಡದ ಇಂಜಿನಿಯರಿಂಗ್ ಪದವೀಧರರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೂಲಕ ಆಧುನಿಕ ತಂತ್ರಜ್ಞಾನದ ತರಬೇತಿಯನ್ನು ಉಚಿತವಾಗಿಯೇ ಪಡೆಯಬಹುದಾಗಿದೆ.
ಎಐ ಕುರಿತು ತರಬೇತಿ ನೀಡುವ ಅವಧಿಯಲ್ಲಿ 15 ಸಾವಿರ ರೂ. ಶಿಷ್ಯವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರ ಕಚೇರಿ (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಬೆಂಗಳೂರು ದಕ್ಷಿಣ ತಾಲ್ಲೂಕು, ಬನಶಂಕರಿ, ಬೆಂಗಳೂರು, ಈ ವಿಳಾಸಕ್ಕೆ ಭೇಟಿ ನೀಡಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 13 ಕೊನೆಯ ದಿನವಾಗಿದೆ. ಹಾಗೆಯೇ, ಹೆಚ್ಚಿನ ವಿವರಗಳಿಗೆ 080- 26711096 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.