ಬೆಂಗಳೂರು : ಕಳೆದ ಆವೃತ್ತಿಯ ಚಾಂಪಿಯನ್ ಆಗಿ 2026ರ ಟಿ20 ವಿಶ್ವಕಪ್‌ಗೆ ಕಾಲಿಟ್ಟಿರುವ ಭಾರತ, ಚುಟುಕು ಸ್ವರೂಪದಲ್ಲಿ ಅತ್ಯಂತ ಯಶಸ್ವಿ ತಂಡಗಳಲ್ಲಿ ಒಂದಾಗಿದೆ. ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಯುವ ಹಾಗೂ ಹೊಸರೂಪದ ಟೀಂ ಇಂಡಿಯಾ ಅಜೇಯವಾಗಿತ್ತು. ಆದರೆ, ಭಾರತದ ಯಶಸ್ಸಿನ ಹಿಂದಿದ್ದ ಬಲಿಷ್ಠ ಬ್ಯಾಟಿಂಗ್ ಪಡೆಯು ಈ ವಿಶ್ವಕಪ್‌ನಲ್ಲಿ ಪರದಾಡುತ್ತಿದೆ. ಅಮೆರಿಕ, ನಮೀಬಿಯಾ, ನೆದರ್ಲೆಂಡ್ಸ್ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದಂತಹ ಸುಲಭ ಗುಂಪಿನಲ್ಲಿದ್ದರೂ ಭಾರತೀಯ ಬ್ಯಾಟರ್‌ಗಳು ತಮ್ಮ ನೈಜ ಆಟ ಪ್ರದರ್ಶಿಸಲು ವಿಫಲರಾಗಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರಿಲ್ಲದೆ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ತಂಡದ ಮೇಲೆ ಒತ್ತಡ ಸ್ಪಷ್ಟವಾಗಿ ಗೋಚರಿಸುತ್ತಿದೆ. ರನ್ ಬೆನ್ನತ್ತುವ ಕಲೆಯಲ್ಲಿ ನಿಪುಣರಾಗಿದ್ದ ವಿರಾಟ್ ಕೊಹ್ಲಿಯ ಅನುಪಸ್ಥಿತಿ ತಂಡವನ್ನು ತೀವ್ರವಾಗಿ ಕಾಡುತ್ತಿದ್ದು, ಸ್ಕೋರ್‌ಬೋರ್ಡ್ ಒತ್ತಡಕ್ಕೆ ಭಾರತ ಕುಸಿಯುತ್ತಿದೆ. ವಿರಾಟ್ ಕೊಹ್ಲಿಯ ಸ್ಥಾನವನ್ನು ತುಂಬುವುದು ಎಂದಿಗೂ ಸುಲಭದ ಮಾತಲ್ಲ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ಅಹ್ಮದ್ ಶೆಹಜಾದ್ ಮತ್ತು ಮೊಹಮ್ಮದ್ ಆಮಿರ್ ಟೀಕಿಸಿದ್ದಾರೆ.
ರನ್ ಬೆನ್ನತ್ತುವುದು ಸುಲಭದ ಕೆಲಸವಲ್ಲ. ಆದರೆ ಕೊಹ್ಲಿ ತಮ್ಮ ಉಪಸ್ಥಿತಿಯಿಂದಲೇ ಬೇರೆಯವರ ಮೇಲೆ ಆ ಒತ್ತಡ ಬೀಳದಂತೆ ನೋಡಿಕೊಳ್ಳುತ್ತಿದ್ದರು. ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುತ್ತಿದ್ದ ಕಾರಣಕ್ಕಾಗಿಯೇ ಅವರನ್ನು ‘ಕಿಂಗ್’ ಎಂದು ಕರೆಯಲಾಗುತ್ತಿತ್ತು ಎಂದು ಶೆಹಜಾದ್ ಹೇಳಿದ್ದಾರೆ. ಕೊಹ್ಲಿ ಇಲ್ಲದ ಈ ತಂಡಕ್ಕೆ ರನ್ ಬೆನ್ನತ್ತುವಾಗ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂಬುದು ತಿಳಿದಿಲ್ಲ. ಸ್ಫೋಟಕ ಆಟಗಾರರನ್ನು ಹೊಂದಿರುವ ಇಂತಹ ತಂಡಗಳು ಮೊದಲ ಇನ್ನಿಂಗ್ಸ್‌ನಲ್ಲಿ ಉತ್ತಮವಾಗಿ ಬ್ಯಾಟ್ ಬೀಸುತ್ತವೆ, ಆದರೆ ಸ್ಕೋರ್‌ಬೋರ್ಡ್ ಒತ್ತಡವಿದ್ದಾಗ ಗುರಿ ಬೆನ್ನತ್ತುವಲ್ಲಿ ವಿಫಲವಾಗುತ್ತವೆ. ಈ ರೀತಿಯ ಒತ್ತಡದಲ್ಲಿ ಅವರು ‘ಚೋಕ್’ ಆಗುತ್ತಾರೆ (ಕುಸಿಯುತ್ತಾರೆ). ಇದಲ್ಲದೆ, ಬಹುಪಾಲು ಆಲ್‌ರೌಂಡರ್‌ಗಳೊಂದಿಗೆ ಕಣಕ್ಕಿಳಿಯುವ ಈ ತಂಡ, ಐಡೆನ್ ಮಾರ್ಕ್ರಮ್‌ರಂತಹ ಬೌಲರ್‌ಗಳ ವಿರುದ್ಧ ವಿಕೆಟ್ ಕಳೆದುಕೊಂಡಾಗ ಇನ್ನಷ್ಟು ಒತ್ತಡಕ್ಕೆ ಸಿಲುಕುತ್ತದೆ ಎಂದು ಶೆಹಜಾದ್ ವಿಶ್ಲೇಷಿಸಿದ್ದಾರೆ.
ಅಗ್ರ ಕ್ರಮಾಂಕದ ವೈಫಲ್ಯ
ವಿಶ್ವಕಪ್‌ಗೂ ಮುನ್ನ ಆರಂಭಿಕರಾಗಿ ಬಡ್ತಿ ಪಡೆದ ಇಶಾನ್ ಕಿಶನ್ ಹೊರತುಪಡಿಸಿ, ಭಾರತದ ಅಗ್ರ ಕ್ರಮಾಂಕವು ಈ ಟೂರ್ನಿಯಲ್ಲಿ ತೀವ್ರ ಸಂಕಷ್ಟ ಎದುರಿಸುತ್ತಿದೆ. ಪಾಕಿಸ್ತಾನ ಮತ್ತು ನಮೀಬಿಯಾ ವಿರುದ್ಧ ಇಶಾನ್ ಕಿಶನ್ ಏಕಾಂಗಿಯಾಗಿ ತಂಡವನ್ನು ಆಧರಿಸಿದ್ದರು. ಅವರು ವಿಫಲವಾದಾಗಲೆಲ್ಲಾ ಪವರ್‌ಪ್ಲೇಯಲ್ಲಿ ಭಾರತ ರನ್ ಗಳಿಸಲು ಪರದಾಡಿದೆ. ಸ್ಫೋಟಕ ಎಡಗೈ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಹಾಗೂ ತಾಂತ್ರಿಕವಾಗಿ ಬಲಿಷ್ಠವಾಗಿರುವ ತಿಲಕ್ ವರ್ಮಾ ಅವರ ವೈಫಲ್ಯ ಇದಕ್ಕೆ ಪ್ರಮುಖ ಕಾರಣ. ಗಾಯದಿಂದ ಚೇತರಿಸಿಕೊಂಡ ನಂತರ ತಿಲಕ್ ವರ್ಮಾ ಕ್ರೀಸ್‌ಗೆ ಕಚ್ಚಿನಿಂತು ಉತ್ತಮ ಆರಂಭ ಪಡೆಯುತ್ತಿದ್ದರೂ, ಅದನ್ನು ದೊಡ್ಡ ಮೊತ್ತವಾಗಿ ಪರಿವರ್ತಿಸಲು ವಿಫಲರಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದವರೆಗೂ ಟೀಂ ಇಂಡಿಯಾ ಆಟಗಾರರ ವೈಯಕ್ತಿಕ ಪ್ರದರ್ಶನದಿಂದಲೇ ಪಾರಾಗುತ್ತಾ ಬಂದಿತ್ತು. ಅಮೆರಿಕ ವಿರುದ್ಧ ಸೂರ್ಯಕುಮಾರ್ ಯಾದವ್, ಪಾಕಿಸ್ತಾನದ ಎದುರು ಇಶಾನ್ ಕಿಶನ್, ನಮೀಬಿಯಾ ವಿರುದ್ಧ ಹಾರ್ದಿಕ್ ಪಾಂಡ್ಯ ಹಾಗೂ ನೆದರ್ಲೆಂಡ್ಸ್ ವಿರುದ್ಧ ಶಿವಂ ದುಬೆ ತಂಡದ ರಕ್ಷಣೆಗೆ ಬಂದಿದ್ದರು. ಆದರೆ, ಬೃಹತ್ ಮೊತ್ತವನ್ನು ಬೆನ್ನತ್ತುವ ವೇಳೆ ಎದುರಾಗುವ ಸಮಸ್ಯೆಗಳನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಬಟಾಬಯಲು ಮಾಡಿದೆ. ದೊಡ್ಡ ಹೊಡೆತಗಳಿಗೆ ಯತ್ನಿಸಿ ಬ್ಯಾಟರ್‌ಗಳು ಪೆವಿಲಿಯನ್ ಪರೇಡ್ ನಡೆಸಿದ್ದು, ದೊಡ್ಡ ಗುರಿಗಳ ಮುಂದೆ ತಂಡದ ದೌರ್ಬಲ್ಯವನ್ನು ಸ್ಪಷ್ಟಪಡಿಸಿದೆ. ಆಸಕ್ತಿದಾಯಕ ಸಂಗತಿಯೆಂದರೆ, ಇದೇ ಪಿಚ್‌ಗಳಲ್ಲಿ ಕೆಲವು ವಾರಗಳ ಹಿಂದೆಯಷ್ಟೇ ಇದೇ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ 200ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಸುಲಭವಾಗಿ ಬೆನ್ನಟ್ಟಿತ್ತು.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಕೇವಲ ಒಂದು ವರ್ಷದಲ್ಲೇ ಐಸಿಸಿ ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಆಗಿ ಹೊರಹೊಮ್ಮಿದ್ದ ಅಭಿಷೇಕ್ ಶರ್ಮಾ ಅವರ ಪ್ರಸ್ತುತ ಫಾರ್ಮ್ ತೀವ್ರ ನಿರಾಸೆ ಮೂಡಿಸಿದೆ. ಕೇವಲ ರನ್ ಗಳಿಸುವುದಷ್ಟೇ ಅಲ್ಲದೆ, ಪವರ್‌ಪ್ಲೇನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಎದುರಾಳಿಗಳ ಮೇಲೆ ಪ್ರಾಬಲ್ಯ ಮೆರೆಯುತ್ತಿದ್ದ ಅವರು, ತವರಿನಲ್ಲಿ ನಡೆಯುತ್ತಿರುವ ಈ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ಅತ್ಯಂತ ಅಪಾಯಕಾರಿ ಅಸ್ತ್ರವಾಗಲಿದ್ದಾರೆ ಎಂದೇ ನಿರೀಕ್ಷಿಸಲಾಗಿತ್ತು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಈ ತಾರೆ, ವಿಶ್ವಕಪ್‌ನಲ್ಲಿ ತಮ್ಮ ಮೊದಲ ರನ್ ಗಳಿಸಲು ನಾಲ್ಕು ಇನ್ನಿಂಗ್ಸ್‌ಗಳನ್ನು ತೆಗೆದುಕೊಳ್ಳಬೇಕಾಯಿತು. ಗ್ರೂಪ್ ಹಂತದ ಸತತ ಮೂರು ಪಂದ್ಯಗಳಲ್ಲಿ ಶೂನ್ಯಕ್ಕೆ (ಡಕ್ ಔಟ್) ಔಟಾಗಿದ್ದ ಅವರು, ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಕೇವಲ 15 ರನ್ ಗಳಿಸಿದರು. ಆಡಿದ ನಾಲ್ಕು ಪಂದ್ಯಗಳಲ್ಲಿ ಅವರು ಕೇವಲ 3.75ರ ಸರಾಸರಿ ಹೊಂದಿದ್ದಾರೆ.
ಇದನ್ನೂ ಓದಿ : ನಂಗೆ ಮಂತ್ರಿಗಿರಿ ಬೇಡ, ಬೇರೆಯವರಿಗೆ ಕೊಡಿ | ಶಾಸಕ ರವಿ ಗಣಿಗ



















