ನವದೆಹಲಿ: ಉಪ ರಾಷ್ಟ್ರಪತಿ ಜಗದೀಪ್ ಧನಕರ್ (Jagdeep Dhankhar) ಅವರನ್ನು ಏಕಾಏಕಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾನುವಾರ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಜಗದೀಪ್ ಧನಕರ್ ಅವರಿಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈಗ ಉಪ ರಾಷ್ಟ್ರಪತಿಯವರ ಆರೋಗ್ಯ ಸ್ಥಿರವಾಗಿದೆ ಎಂಬುದಾಗಿ ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಏಮ್ಸ್ ಆಸ್ಪತ್ರೆಯ ಸಿಸಿಯುನಲ್ಲಿ ಡಾ.ರಾಜೀವ್ ನಾರಂಗ್ ಅವರು 73 ವರ್ಷದ ಜಗದೀಪ್ ಧನಕರ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಧನಕರ್ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಯಾವುದೇ ಅಪಾಯವಿಲ್ಲ ಎಂಬುದಾಗಿ ತಿಳಿದುಬಂದಿದೆ. ಹಲವು ವೈದ್ಯರ ತಂಡವು ಜಗದೀಪ್ ಧನಕರ್ ಅವರ ಆರೋಗ್ಯದ ಸ್ಥಿತಿ ಮೇಲೆ ನಿಗಾ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಜಗದೀಪ್ ಧನಕರ್ ಅವರು 2022ರಿಂದಲೂ ದೇಶದ ಉಪ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮೊದಲು ಇವರು 3 ವರ್ಷ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಜಗದೀಪ್ ಧನಕರ್ ಅವರು ರಾಜಸ್ಥಾನ ಮೂಲದವರು.