ತಿರುವನಂತಪುರಂ: ಕಾಂಗ್ರೆಸ್ ಹಿರಿಯ ನಾಯಕ, ಸಂಸದರೂ ಆಗಿರುವ ಶಶಿ ತರೂರ್ (Shashi Tharoor) ಅವರು ಆಗಾಗ ಕೇಂದ್ರ ಸರ್ಕಾರದ ನೀತಿಗಳನ್ನು, ಪ್ರಧಾನಿ ನರೇಂದ್ರ ಮೊದಿ ಅವರ ತೀರ್ಮಾನಗಳನ್ನು ಹೊಗಳುತ್ತಲೇ ಇರುತ್ತಾರೆ. ಇದರಿಂದಾಗಿ ಕಾಂಗ್ರೆಸ್ (Congress) ಹಾಗೂ ಶಶಿ ತರೂರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಇದರ ಬೆನ್ನಲ್ಲೇ, “ನನಗೆ ಬೇರೆ ಆಯ್ಕೆಗಳಿವೆ” ಎಂದು ತಿರುವನಂತಪುರಂ ಸಂಸದ ನೀಡಿರುವ ಹೇಳಿಕೆಯು ಭಾರಿ ಸಂಚಲನ ಮೂಡಿಸಿದೆ.
ದಿ ಇಂಡಿಯನ್ ಎಕ್ಸ್ ಪ್ರೆಸ್ ಮಲಯಾಳಂ ಪಾಡ್ ಕಾಸ್ಡ್ ವೇಳೆ ಶಶಿ ತರೂರ್ ಇಂತಹದ್ದೊಂದು ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ. “ಕೇರಳದಲ್ಲಿ ಕಾಂಗ್ರೆಸ್ ಪ್ರಯತ್ನ, ಶ್ರಮ, ನಾಯಕತ್ವ ಸರಿಯಾಗಿಲ್ಲ. ಕಾಂಗ್ರೆಸ್ ಪಕ್ಷದ ಪರವಾಗಿ ನಾನು ಕೆಲಸ ಮಾಡಲು ತಯಾರಿದ್ದೇನೆ. ಪಕ್ಷವನ್ನು ಸಂಘಟಿಸುತ್ತೇನೆ. ಆದರೆ, ಪಕ್ಷಕ್ಕೆ ನನ್ನ ಅವಶ್ಯಕತೆ ಇಲ್ಲ ಎಂದಾರೆ ನನಗೆ ಬೇರೆ ಆಯ್ಕೆಗಳಿವೆ” ಎಂದು ಶಶಿ ತರೂರ್ ಹೇಳಿದ್ದಾರೆ. ಹಾಗಾದರೆ, “ಬಿಜೆಪಿ ಸೇರುತ್ತೀರಾ” ಎಂಬ ಪ್ರಶ್ನೆಗೆ, “ಇಲ್ಲ” ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿದ್ದನ್ನು ಶಶಿ ತರೂರ್ ಹೊಗಳಿದ್ದರು. ಮೋದಿ ಮಾಡಿಕೊಂಡು ಬಂದ ಒಪ್ಪಂದಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲದೆ, ಕೇರಳದ ಆಡಳಿತಾರೂಢ ಎಲ್.ಡಿ.ಎಫ್ ಸರ್ಕಾರದ ನೀತಿಗಳನ್ನು ಕೂಡ ಶಶಿ ತರೂರ್ ಅವರು ಹೊಗಳಿದ್ದರು.
ಶಶಿ ತರೂರ್ ಅವರು ಬೇರೆ ಸರ್ಕಾರಗಳು, ನಾಯಕರ ತೀರ್ಮಾನಗಳನ್ನು ಹೊಗಳುವುದು ಇದೇ ಮೊದಲಲ್ಲ. ದೇಶದಲ್ಲಿ ಯಾವುದೇ ಪಕ್ಷ, ನಾಯಕರು ಒಳ್ಳೆಯ ತೀರ್ಮಾನಗಳನ್ನು ತೆಗೆದುಕೊಂಡರೆ, ಅವುಗಳನ್ನು ತರೂರ್ ಮುಕ್ತವಾಗಿ ಹೊಗಳುತ್ತಾರೆ. ಹಾಗಾಗಿ, ಪಕ್ಷದಲ್ಲಿ ಅವರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾಗಿ, ಶಶಿ ತರೂರ್ ಅವರ ಮುಂದಿನ ನಡೆಗಳು ಏನಾಗಿರಲಿವೆ? ಅವರ ಮುಂದಿರುವ ಆಯ್ಕೆಗಳು ಯಾವವು ಎಂಬ ಕುತೂಹಲ ಮೂಡಿದೆ.