ಬೆಂಗಳೂರು: ಕರ್ನಾಟಕದ ಬ್ಯಾಟ್ಸ್‌ಮನ್‌ಗಳ ಮೇಲೆ ವಿದರ್ಭ ಕ್ರಿಕೆಟ್ ತಂಡಕ್ಕಿರುವ ಒಲವು ಗುಟ್ಟಾಗಿ ಉಳಿದಿಲ್ಲ. ಕರುಣ್ ನಾಯರ್ ತವರು ತಂಡಕ್ಕೆ ಮರಳಿದ ನಂತರ, ಇದೀಗ ರಣಜಿ ಚಾಂಪಿಯನ್ ವಿದರ್ಭ ತಂಡವು ಕರ್ನಾಟಕದ ಮತ್ತೊಬ್ಬ ಅನುಭವಿ ಬ್ಯಾಟ್ಸ್‌ಮನ್ ರವಿಕುಮಾರ್ ಸಮರ್ಥ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧವಾಗಿದೆ. ಈ ಮೂಲಕ, ಇತ್ತೀಚಿನ ವರ್ಷಗಳಲ್ಲಿ ವಿದರ್ಭ ತಂಡದ ಪರ ಆಡಿದ ಮೂರನೇ ಪ್ರಮುಖ ಕನ್ನಡಿಗ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಸಮರ್ಥ್ ಪಾತ್ರರಾಗಲಿದ್ದಾರೆ.
ತಮ್ಮ ಕ್ರಿಕೆಟ್ ವೃತ್ತಿಜೀವನದ ಬಹುಪಾಲು ಕರ್ನಾಟಕವನ್ನೇ ಪ್ರತಿನಿಧಿಸಿದ್ದ 32 ವರ್ಷದ ಆರ್. ಸಮರ್ಥ್, ಕಳೆದ ಒಂದು ವರ್ಷ ಉತ್ತರಾಖಂಡ ತಂಡದ ಪರ ಆಡಿದ್ದರು. ಇದೀಗ ಅವರು ತಮ್ಮ ವೃತ್ತಿಜೀವನದಲ್ಲಿ ಮತ್ತೊಂದು ಹೊಸ ಅಧ್ಯಾಯವನ್ನು ಆರಂಭಿಸಲು ಸಜ್ಜಾಗಿದ್ದಾರೆ.
ವಿದರ್ಭ ತಂಡಕ್ಕೆ ಸಮರ್ಥ್ ಸೇರ್ಪಡೆ
ವಿದರ್ಭ ತಂಡದ ಈ ನಡೆ ಮಹತ್ವದ್ದಾಗಿದೆ. ಈ ಹಿಂದೆ ಗಣೇಶ್ ಸತೀಶ್ ಅವರು ಹಲವು ವರ್ಷಗಳ ಕಾಲ ವಿದರ್ಭ ತಂಡದ ಬ್ಯಾಟಿಂಗ್‌ನ ಆಧಾರಸ್ತಂಭವಾಗಿದ್ದರು. ಕಳೆದ ಋತುವಿನಲ್ಲಿ ಕರುಣ್ ನಾಯರ್ ಗಳಿಸಿದ 863 ರನ್‌ಗಳ ಬಲದಿಂದ ವಿದರ್ಭ ತಂಡವು ರಣಜಿ ಟ್ರೋಫಿ ಗೆದ್ದುಕೊಂಡಿತ್ತು. ಇದೀಗ ಕರುಣ್ ನಾಯರ್ ಕರ್ನಾಟಕ ತಂಡಕ್ಕೆ ಮರಳಿದ್ದು, ಅವರ ಸ್ಥಾನವನ್ನು ತುಂಬಲು ವಿದರ್ಭ ತಂಡವು ಸಮರ್ಥ್ ಅವರನ್ನು ಕರೆತಂದಿದೆ. ಮತ್ತೊಂದು ರಣಜಿ ಪ್ರಶಸ್ತಿಯನ್ನು ಗೆಲ್ಲುವ ಗುರಿ ಹೊಂದಿರುವ ವಿದರ್ಭ ತಂಡಕ್ಕೆ ಸಮರ್ಥ್ ಅವರ ಸೇರ್ಪಡೆ ಬಲ ತುಂಬಲಿದೆ.
ಈ ಬಗ್ಗೆ ‘ಕ್ರಿಕ್‌ಬಝ್’ ಜೊತೆ ಮಾತನಾಡಿದ ಸಮರ್ಥ್, “ನಾನು ಉತ್ತರಾಖಂಡದಿಂದ ನಿರಾಕ್ಷೇಪಣಾ ಪತ್ರವನ್ನು (NOC) ಪಡೆದಿದ್ದೇನೆ ಮತ್ತು ವಿದರ್ಭ ತಂಡದೊಂದಿಗಿನ ಮಾತುಕೆ ಪೂರ್ಣಗೊಳ್ಳಲು ಕಾಯುತ್ತಿದ್ದೇನೆ,” ಎಂದು ಖಚಿತಪಡಿಸಿದ್ದಾರೆ.
2013ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಮರ್ಥ್, ಇದುವರೆಗೆ 95 ಪಂದ್ಯಗಳನ್ನಾಡಿದ್ದು, ಸುಮಾರು 40ರ ಸರಾಸರಿಯಲ್ಲಿ 6,000ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಕಳೆದ ಋತುವಿನಲ್ಲಿ ಉತ್ತರಾಖಂಡ ಪರ ಆಡಿದ್ದ ಅವರು, ಏಳು ರಣಜಿ ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 649 ರನ್ ಗಳಿಸಿ ಗಮನಾರ್ಹ ಪ್ರದರ್ಶನ ನೀಡಿದ್ದರು.