ಬರೋಬ್ಬರಿ 1,464 ಕೋಟಿ ಮೌಲ್ಯದ ನಕಲಿ ಬಿಲ್ ವಹಿವಾಟು | ಸರ್ಕಾರಕ್ಕೆ 355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರ ಬಂಧನ!ಗಾಂಧಿನಗರ: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲುಷಿತ ನೀರು 10ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ ಬೆನ್ನಲ್ಲೇ ಇದೀಗ ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ ಮಾಲಿನ್ಯಗೊಂಡ ಕುಡಿಯುವ ನೀರಿನಿಂದ ಆರೋಗ್ಯ ಭೀತಿ ಉಂಟಾಗಿದೆ. ಕಳೆದ ಐದು ದಿನಗಳಲ್ಲಿ ಟೈಫಾಯ್ಡ್ ಶಂಕಿತ 100ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಹೆಚ್ಚಿನವರು ಗಾಂಧಿನಗರ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಗರದ ಹಲವು ಪ್ರದೇಶಗಳಲ್ಲಿ ಜನರು ಅಸ್ವಸ್ಥರಾಗುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ವ್ಯಾಪಕ ತನಿಖೆ ಆರಂಭಿಸಿದೆ. 104 ಮಂದಿ ಅನಾರೋಗ್ಯಪೀಡಿತರ ಪೈಕಿ ಮಕ್ಕಳ ಸಂಖ್ಯೆಯೇ ಹೆಚ್ಚಿದ್ದು, ಈ ನಡುವೆ ಸರ್ಕಾರದಿಂದ ತುರ್ತು ಕ್ರಮಗಳು ಆರಂಭಗೊಂಡಿವೆ.
22 ವೈದ್ಯರ ವಿಶೇಷ ತಂಡ ರಚನೆ:
ಗುಜರಾತ್ ಉಪಮುಖ್ಯಮಂತ್ರಿ ಹರ್ಷ ಸಾಂಗ್ವಿ ಅವರು ಗಾಂಧಿನಗರ ಸಿವಿಲ್ ಆಸ್ಪತ್ರೆಗೆ ಭೇಟಿ ನೀಡಿ, ರೋಗಿಗಳ ಆರೋಗ್ಯ ವಿಚಾರಿಸಿ, ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾರೆ. “ಪ್ರಸ್ತುತ 104 ಶಂಕಿತ ಪ್ರಕರಣಗಳು ವರದಿಯಾಗಿವೆ. ಚಿಕಿತ್ಸೆ ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. 22 ಮಂದಿ ವೈದ್ಯರ ವಿಶೇಷ ತಂಡ ರಚಿಸಲಾಗಿದೆ,” ಎಂದು ಅವರು ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವವರ ಕುಟುಂಬಗಳಿಗೆ ಆಹಾರ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿರುವುದಾಗಿ ಅವರು ತಿಳಿಸಿದ್ದಾರೆ.
ನೀರಿನ ಮಾದರಿಯಲ್ಲೇ ಮಾಲಿನ್ಯ ದೃಢ
ಸಿವಿಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಿತಾ ಪಾರಿಖ್ ಅವರ ಪ್ರಕಾರ, ದಾಖಲಾಗಿರುವ ಎಲ್ಲಾ ರೋಗಿಗಳ ಸ್ಥಿತಿ ಸ್ಥಿರವಾಗಿದೆ. ಆದರೆ ಆರೋಗ್ಯ ಇಲಾಖೆಯು ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ಕಲ್ಮಶಗಳಿರುವುದು ಪತ್ತೆಯಾಗಿದ್ದು, ಕುಡಿಯುವ ನೀರು ಸುರಕ್ಷಿತವಾಗಿಲ್ಲ ಎಂಬುದು ಬಹಿರಂಗವಾಗಿದೆ.
ಮನೆಮನೆಯಲ್ಲಿ ಆರೋಗ್ಯ ಸಮೀಕ್ಷೆ
ಕಲುಷಿತ ನೀರು ಪತ್ತೆಯಾದ ಪ್ರದೇಶಗಳಲ್ಲಿ ಗಾಂಧಿನಗರ ಮಹಾನಗರಪಾಲಿಕೆ ಮನೆಮನೆ ಸಮೀಕ್ಷೆ ಆರಂಭಿಸಿದೆ. ನಿವಾಸಿಗಳಿಗೆ ಕುದಿಸಿದ ನೀರು ಮಾತ್ರ ಕುಡಿಯುವಂತೆ, ಮನೆಯ ಆಹಾರ ಸೇವಿಸುವಂತೆ ಹಾಗೂ ನೀರಿನ ಟ್ಯಾಂಕ್‌ಗಳನ್ನು ಕ್ಲೋರಿನ್ ಗುಳಿಗೆಗಳಿಂದ ಶುಚಿಗೊಳಿಸುವಂತೆ ಸೂಚನೆ ನೀಡಲಾಗಿದೆ.
ಕೇಂದ್ರ ಗೃಹ ಸಚಿವ ಹಾಗೂ ಗಾಂಧಿನಗರ ಕ್ಷೇತ್ರದ ಸಂಸದ ಅಮಿತ್ ಶಾ ಅವರು, ಜಿಲ್ಲಾಧಿಕಾರಿಯೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಪರಿಸ್ಥಿತಿಯ ವಿವರಣೆ ಕೇಳಿದ್ದಾರೆ. ಅವರು ಸಂಜೆ ಮತ್ತೊಂದು ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹರ್ಷ ಸಾಂಗ್ವಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಪ್ರಕರಣಗಳ ಮೂಲ ಕಾರಣ ಪತ್ತೆಹಚ್ಚಲು ತನಿಖೆ ಮುಂದುವರೆಸಿದ್ದಾರೆ. “ಎಲ್ಲಾ ರೋಗಿಗಳು ಯೋಗ್ಯ ಚಿಕಿತ್ಸೆ ಪಡೆಯಲು ಸರ್ಕಾರ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಬರೋಬ್ಬರಿ 1,464 ಕೋಟಿ ಮೌಲ್ಯದ ನಕಲಿ ಬಿಲ್ ವಹಿವಾಟು | ಸರ್ಕಾರಕ್ಕೆ 355 ಕೋಟಿ ವಂಚಿಸಲು ಯತ್ನಿಸಿದ ನಾಲ್ವರ ಬಂಧನ!



















