ಭೋಪಾಲ್/ಇಂದೋರ್: ದೇಶದ ‘ಅತ್ಯಂತ ಸ್ವಚ್ಛ ನಗರಿ’ ಎಂಬ ಖ್ಯಾತಿ ಗಳಿಸಿರುವ ಇಂದೋರ್‌ನಲ್ಲಿ ನಡೆದ ಕಲುಷಿತ ನೀರಿನ ದುರಂತ ಕೇವಲ ಆಕಸ್ಮಿಕವಲ್ಲ, ಬದಲಿಗೆ ಇದು ಆಡಳಿತ ವ್ಯವಸ್ಥೆಯ ಸಂಪೂರ್ಣ ವೈಫಲ್ಯ ಮತ್ತು ನಿರ್ಲಕ್ಷ್ಯದ ಪರಿಣಾಮ ಎಂಬುದು ಈಗ ಜಗಜ್ಜಾಹೀರಾಗಿದೆ. ಭಗೀರಥಪುರ ಪ್ರದೇಶದಲ್ಲಿ ಕಲುಷಿತ ನೀರು ಕುಡಿದು ಈವರೆಗೆ 11 ಅಮಾಯಕರು ಪ್ರಾಣ ಕಳೆದುಕೊಂಡಿದ್ದು, 1400ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ.
ನೀರಿಗೆ ಬೆರೆತ ಚರಂಡಿ ತ್ಯಾಜ್ಯ
ಭಗೀರಥಪುರ ಪೊಲೀಸ್ ಠಾಣೆಯ ಪಕ್ಕದಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಸೋರಿಕೆಯಾಗಿರುವುದೇ ಈ ಅನಾಹುತಕ್ಕೆ ಮುಖ್ಯ ಕಾರಣ ಎಂದು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಈ ಸೋರಿಕೆಯ ಮೂಲಕ ಒಳಚರಂಡಿಯ ತ್ಯಾಜ್ಯ ನೀರು ಕುಡಿಯುವ ನೀರಿನ ಪೈಪ್‌ಲೈನ್ ಸೇರಿಕೊಂಡಿದೆ.
ಸ್ವತಃ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಮತ್ತು ನಗರಾಭಿವೃದ್ಧಿ ಸಚಿವ ಕೈಲಾಶ್ ವಿಜಯವರ್ಗಿಯಾ ಅವರು ಕುಡಿಯುವ ನೀರಿನಲ್ಲಿ ಚರಂಡಿ ನೀರು ಸೇರಿಕೊಂಡಿರುವುದನ್ನು ಮತ್ತು ಅಧಿಕಾರಿಗಳ ನಿರ್ಲಕ್ಷ್ಯವನ್ನು ಒಪ್ಪಿಕೊಂಡಿದ್ದಾರೆ. ಎಂಜಿಎಂ ವೈದ್ಯಕೀಯ ಕಾಲೇಜಿನಲ್ಲಿ ನಡೆಸಲಾದ ನೀರಿನ ಮಾದರಿ ಪರೀಕ್ಷೆಯಲ್ಲೂ ನೀರು ಕಲುಷಿತಗೊಂಡಿರುವುದು ದೃಢಪಟ್ಟಿದೆ.
ಟೆಂಡರ್ ಆಗಿದ್ದರೂ ಕೆಲಸವಾಗಿಲ್ಲ!
ಅಚ್ಚರಿಯ ಸಂಗತಿಯೆಂದರೆ, ಭಗೀರಥಪುರ ಪೈಪ್‌ಲೈನ್ ಬದಲಾವಣೆಗಾಗಿ 2025ರ ಆಗಸ್ಟ್‌ನಲ್ಲೇ 2.4 ಕೋಟಿ ರೂ. ವೆಚ್ಚದ ಟೆಂಡರ್ ಕರೆಯಲಾಗಿತ್ತು. ಅಲ್ಲಿನ ನೀರು ಕಲುಷಿತಗೊಂಡಿದೆ ಮತ್ತು ದುರ್ವಾಸನೆ ಬರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿಯೇ ಈ ಟೆಂಡರ್ ಕರೆಯಲಾಗಿತ್ತು. ಆದರೆ, ಅಧಿಕಾರಿಗಳು ಯಾವುದೇ ತುರ್ತು ಕಾಮಗಾರಿ ನಡೆಸಲಿಲ್ಲ. ಜನರು ಸಾಯಲು ಪ್ರಾರಂಭಿಸಿದ ನಂತರವಷ್ಟೇ, ಆಡಳಿತವು ತರಾತುರಿಯಲ್ಲಿ ಟೆಂಡರ್ ಪ್ರಕ್ರಿಯೆಗಳನ್ನು ಚುರುಕುಗೊಳಿಸಿದೆ.
“ಇದು ಕೇವಲ ವೈಫಲ್ಯವಲ್ಲ, ಇದು ಜನರನ್ನು ಸಾವಿಗೆ ದೂಡಿದ ಅಮಾನವೀಯ ಕೃತ್ಯ,” ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯೋಜನೆಗಳಿದ್ದರೂ ಪ್ರಯೋಜನವಿಲ್ಲ
‘ಅಮೃತ್ 2.0’ ಯೋಜನೆಯಡಿ ಇಂದೋರ್‌ಗೆ ನೀರಿನ ಮೂಲಸೌಕರ್ಯಕ್ಕಾಗಿ ಸುಮಾರು 1,700 ಕೋಟಿ ರೂ. ಮಂಜೂರಾಗಿದೆ. ಇದರಲ್ಲಿ 579 ಕೋಟಿ ರೂ. ಕಾಮಗಾರಿಗಳಿಗೆ ಗುತ್ತಿಗೆ ನೀಡಲಾಗಿದ್ದರೂ, ಹಳೆಯ ಬಡಾವಣೆಗಳಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರಿನ ಪೈಪ್‌ಲೈನ್‌ಗಳು ಒಂದಕ್ಕೊಂದು ಸೇರಿಕೊಳ್ಳುತ್ತಿರುವುದು ಅಧಿಕಾರಿಗಳ ಕಳಪೆ ಮೇಲ್ವಿಚಾರಣೆಗೆ ಸಾಕ್ಷಿಯಾಗಿದೆ.
ದೂರು ಕೊಟ್ಟರೂ ಕ್ಯಾರೇ ಎನ್ನದ ಅಧಿಕಾರಿಗಳು
“ನಾವು ಹಲವು ಬಾರಿ ಕೌನ್ಸಿಲರ್‌ಗೆ ದೂರು ನೀಡಿದ್ದೆವು, ನೀರು ವಾಸನೆ ಬರುತ್ತಿದೆ ಎಂದು ಹೇಳಿಕೊಂಡಿದ್ದೆವು. ಆದರೆ ಯಾರೂ ನಮ್ಮ ಮಾತನ್ನು ಕೇಳಲಿಲ್ಲ. ಅವರು ಗುತ್ತಿಗೆಗಾಗಿ ಜಗಳಾಡುತ್ತಿದ್ದರು, ಇತ್ತ ಚರಂಡಿ ನೀರು ನಮ್ಮ ಮನೆ ಸೇರುತ್ತಿತ್ತು,” ಎಂದು ಸ್ಥಳೀಯ ನಿವಾಸಿ ಓಂಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾನವ ಹಕ್ಕು ಆಯೋಗದ ನೋಟಿಸ್
ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಜನರ ದೂರುಗಳನ್ನು ನಿರ್ಲಕ್ಷಿಸಿ ಸಾವು ಸಂಭವಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಸದ್ಯ ಮೂವರು ಸದಸ್ಯರ ತನಿಖಾ ಸಮಿತಿಯನ್ನು ರಚಿಸಲಾಗಿದ್ದು, ಕೆಲ ಕೆಳಹಂತದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಫೆಬ್ರವರಿ.23ಕ್ಕೆ ಆದಿಚುಂಚನಗಿರಿಗೆ ಪ್ರಧಾನಿ ಮೋದಿ ಭೇಟಿ



















