ಬೆಂಗಳೂರು | ಐಪಿಎಸ್ ಅಧಿಕಾರಿ, ಡಿಜಿಪಿ ರಾಮಚಂದ್ರರಾವ್ ರಾಸಲೀಲೆಯಲ್ಲಿ ತೊಡಗಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿ ಎಲ್ಲೆಡೆ ಹಲ್‌ಚಲ್ ಎಬ್ಬಿಸುತ್ತಿದ್ದು, ಕರ್ನಾಟಕ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಯ ‘ಕಾಮಕಾಂಡ’ ಈಗ ಇಡೀ ಸರ್ಕಾರವನ್ನೇ ಮುಜುಗರಕ್ಕೀಡು ಮಾಡಿದೆ.
ಡಿಜಿಪಿ ಡಾ.ರಾಮಚಂದ್ರರಾವ್, ಸರಸವಾಡಿದ್ದಾರೆ ಎನ್ನಲಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನು ಈ ಬಗ್ಗೆ ಇದೀಗ ಸಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದಾರೆ.

ಕಚೇರಿಯಲ್ಲಿ ಕುಳಿತು ಪೊಲೀಸ್ ಯೂನಿಫಾರಂನಲ್ಲಿಯೇ ಮಹಿಳೆಯರೊಂದಿಗೆ ಅಶ್ಲೀಲವಾಗಿ ವರ್ತಿಸಿದ ಡಿಜಿಪಿ ರಾಮಚಂದ್ರರಾವ್ ವಿರುದ್ದ ಆಲ್ ಇಂಡಿಯಾ ಸರ್ವಿಸಸ್ 1969ರ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕೆಂದು ದಿನೇಶ್ ಕಲ್ಲಹಳ್ಳಿ ಆಗ್ರಹಿಸಿದ್ದಾರೆ.
ಸಮವಸ್ತ್ರದಲ್ಲಿ ಈ ರೀತಿ ವರ್ತನೆ ತೋರುವುದು ಪೊಲೀಸ್ ಸೇವೆಗೆ ಅವಮಾನ. ಆರೋಪಿತ ಅಧಿಕಾರಿಯನ್ನು ಆದಷ್ಟು ಬೇಗ ಅಮಾನತುಗೊಳಿಸಿ, ಯಾರು ಕಾನೂನಿಗಿಂತ ಮೇಲೆಲ್ಲ ಎಂಬ ತತ್ವ ಅನ್ವಯಿಸಬೇಕು. ಗಂಭೀರ ದುರ್ನಡತೆ ತೋರಿದ ಅಧಿಕಾರಿಯ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ್ದ ಪ್ರಕರಣ ಸಂಬಂಧ ನಟಿ ರನ್ಯಾ ರಾವ್ ಬಂಧನ ಬೆನ್ನಲ್ಲೇ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ಪ್ರಕರಣದಲ್ಲಿ ತಳಕು ಹಾಕಿಕೊಂಡಿತ್ತು. ನಟಿ ರನ್ಯಾಗೆ ವಿಮಾನ ನಿಲ್ದಾಣದಲ್ಲಿ ಪ್ರೋಟೋಕಾಲ್ ನೀಡಿದ ಬಗ್ಗೆ ತನಿಖೆಗೆ ಕರ್ನಾಟಕ ಗೃಹ ಇಲಾಖೆ ಆದೇಶಿಸಿತ್ತು. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಮಚಂದ್ರ ರಾವ್ ಕೂಡ ಶಾಮಿಲಾಗಿದ್ದಾರೆಯೇ? ದುಬೈನಿಂದ ಬೆಂಗಳೂರಿಗೆ ಚಿನ್ನ ಸಾಗಿಸುವಾಗ ಶಿಷ್ಟಾಚಾರ ದುರ್ಬಳಕೆ ಆಗಿರುವುದರಲ್ಲಿ ಅವರ ಕೈವಾಡ ಇದೆಯೇ ಎಂಬ ಬಗ್ಗೆ ತನಿಖೆಗೆ ಸೂಚಿಸಲಾಗಿತ್ತು.
ಇದನ್ನೂ ಓದಿ : ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರಗೆ ಸಂಕಷ್ಟ | ಲೋಕಾಯುಕ್ತಕ್ಕೆ ದೂರು!



















