ಮುಂಬೈ: ಬಾಲಿವುಡ್ ಖ್ಯಾತ ನಟಿ ಕಾಜೋಲ್ ಅವರು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹಿಂದಿಯಲ್ಲಿ ಮಾತನಾಡಲು ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೆ ಈ ಬಗ್ಗೆ ಪ್ರಶ್ನಿಸಿದ ಪತ್ರಕರ್ತನಿಗೆ, “ಅರ್ಥ ಮಾಡಿಕೊಳ್ಳುವವರು ಮಾಡಿಕೊಳ್ಳಲಿ!” ಎಂದು ಸಿಟ್ಟಿನಿಂದ ಪ್ರತಿಕ್ರಿಯಿಸಿರುವುದು ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಟಿಯ ವರ್ತನೆಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುತ್ತಿದ್ದ ಕಾಜೋಲ್ ಅವರನ್ನು, ಪಾಪರಾಜಿ ಒಬ್ಬರು ಹಿಂದಿಯಲ್ಲೂ ಒಂದೆರಡು ಮಾತುಗಳನ್ನಾಡುವಂತೆ ಕೋರಿದರು. ಇದರಿಂದ ಸಿಟ್ಟಿಗೆದ್ದ ಕಾಜೋಲ್, “ಈಗ ನಾನಿದನ್ನು ಹಿಂದಿಯಲ್ಲಿ ಹೇಳಬೇಕೆ? ಯಾರಿಗೆ ಅರ್ಥವಾಗಬೇಕೋ, ಅವರಿಗೆ ಅರ್ಥವಾಗುತ್ತದೆ!” ಎಂದು ಖಾರವಾಗಿ ಉತ್ತರಿಸಿದ್ದಾರೆ.
ಈ ವಿಡಿಯೋ ಕ್ಷಣಾರ್ಧದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ, ಕಾಜೋಲ್ ವಿರುದ್ಧ ಟೀಕೆಗಳ ಸುರಿಮಳೆಯಾಗಿದೆ. “ಹಿಂದಿ ಭಾಷೆಯಲ್ಲಿ ಮಾತನಾಡಲು ಅವರಿಗೆ ಮುಜುಗರ ಮತ್ತು ನಾಚಿಕೆಯಾಗುವುದಾದರೆ, ಅವರು ಬಾಲಿವುಡ್ ಹಿಂದಿ ಸಿನೆಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಬೇಕು. ಇಂತಹ ದ್ವಂದ್ವ ನೀತಿಯನ್ನು ಬಿಡಬೇಕು” ಎಂದು ಕೆಲವರು ಬರೆದಿದ್ದಾರೆ. “ಅವರು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡುವುದೇಕೆ? ಅವರಿಗೆ ಹಿಂದಿ ಇಷ್ಟವಿಲ್ಲದಿದ್ದರೆ, ಮರಾಠಿ ಚಿತ್ರಗಳಲ್ಲಿ ಮಾತ್ರ ನಟಿಸಲಿ” ಎಂದು ಮತ್ತೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು, ಕೆಲವರು ಕಾಜೋಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಭಾಷಾ ವಿವಾದದ ಹಿನ್ನೆಲೆ
ಮಹಾರಾಷ್ಟ್ರದಲ್ಲಿ “ರಾಜ್ಯದಲ್ಲಿ ವಾಸಿಸುತ್ತಿದ್ದರೆ ಮರಾಠಿ ಮಾತನಾಡಿ” ಎಂಬ ಭಾಷಾ ವಿವಾದ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲೇ ಕಾಜೋಲ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ, ಮಹಾರಾಷ್ಟ್ರ ಸರ್ಕಾರವು ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯನ್ನಾಗಿ ಮಾಡುವ ನಿರ್ಧಾರವನ್ನು ಕೈಗೊಂಡಿತ್ತು. ಆದರೆ, ತೀವ್ರ ವಿರೋಧದ ನಂತರ ಅದನ್ನು ಹಿಂಪಡೆದಿತ್ತು. ಇದರ ಬೆನ್ನಲ್ಲೇ, ಮುಂಬೈ ಮತ್ತು ಪುಣೆಯಲ್ಲಿ ಮರಾಠಿ ಮಾತನಾಡಲು ನಿರಾಕರಿಸಿದವರೊಂದಿಗೆ ಎಂಎನ್ಎಸ್ ಕಾರ್ಯಕರ್ತರು ವಾಗ್ವಾದಕ್ಕಿಳಿದ, ಹಲ್ಲೆ ನಡೆಸಿದ ಹಲವು ಘಟನೆಗಳು ವರದಿಯಾಗಿದ್ದವು.
ಈ ಹಿಂದೆ ಭಾಷಾ ಸಂಘರ್ಷದ ಬಗ್ಗೆ ನಟಿ ರೇಣುಕಾ ಶಹಾನೆ ಕೂಡಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. “ನೀವು ಒಂದು ಸ್ಥಳದಲ್ಲಿ ದೀರ್ಘಕಾಲ ವಾಸಿಸುತ್ತಿದ್ದರೆ, ಅಲ್ಲಿನ ಸ್ಥಳೀಯ ಭಾಷೆ, ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಗೌರವಿಸುವುದು ಒಳ್ಳೆಯದು. ಮಾತನಾಡುವುದಕ್ಕಿಂತ ಹೆಚ್ಚಾಗಿ, ಅದನ್ನು ಗೌರವಿಸುವ ಉದ್ದೇಶ ಮುಖ್ಯ” ಎಂದು ಅವರು ಹೇಳಿದ್ದರು.



















