ಮುಂಬೈ : ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ‘ಎಕ್ಸ್‌ಪೀರಿಯನ್ಸ್ ಅಬುಧಾಬಿ’ ಪ್ರವಾಸೋದ್ಯಮದ ಜಾಹೀರಾತಿನಲ್ಲಿ ‘ಹಿಜಾಬ್’ ಧರಿಸಿದ್ದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಒಳಗಾಗಿದ್ದಾರೆ. ಆದರೆ, ಫ್ಯಾನ್ಸ್ ನಟಿಯ ಬೆಂಬಲಕ್ಕೆ ನಿಂತಿದ್ದು, ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ಜಾಹೀರಾತಿನಲ್ಲಿ ಏನಿದೆ? ದೀಪಿಕಾ ಪಡುಕೋಣೆ ಮತ್ತು ಅವರ ಪತಿ ರಣವೀರ್ ಸಿಂಗ್ ಅಬುಧಾಬಿ ಪ್ರವಾಸೋದ್ಯಮದ ಪ್ರಾದೇಶಿಕ ರಾಯಭಾರಿಗಳಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಜಾಹೀರಾತಿನಲ್ಲಿ, ಈ ಜೋಡಿ ಅಬುಧಾಬಿಯ ಲೌವ್ರೆ ಮ್ಯೂಸಿಯಂ ಮತ್ತು ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುವುದನ್ನು ತೋರಿಸಲಾಗಿದೆ.

ಮಸೀದಿಗೆ ಭೇಟಿ ನೀಡುವಾಗ, ದೀಪಿಕಾ ಅವರು ತಮ್ಮ ಮುಖ ಮತ್ತು ಕೈಗಳನ್ನು ಹೊರತುಪಡಿಸಿ ಇಡೀ ದೇಹವನ್ನು ಮುಚ್ಚುವ ಕೆಂಪು ಬಣ್ಣದ ಉಡುಪು, ಅಂದರೆ ‘ಅಬಯಾ’ ಧರಿಸಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ದೀಪಿಕಾ ಅವರನ್ನು ಟೀಕಿಸಲು ಪ್ರಾರಂಭಿಸಿದ್ದಾರೆ. ಮಹಿಳೆಯರ ಆಯ್ಕೆಯ ಬಗ್ಗೆ ದೀಪಿಕಾ ಈ ಹಿಂದೆ ಮಾಡಿದ್ದ ‘ಮೈ ಚಾಯ್ಸ್’ ಎಂಬ ಕಿರುಚಿತ್ರವನ್ನು ಉಲ್ಲೇಖಿಸಿ, ಈಗ ದುಡ್ಡಿಗಾಗಿ ತಮ್ಮ ಆಯ್ಕೆಯನ್ನು ಬದಲಿಸಿದ್ದಾರೆಯೇ ಎಂದು ಹಲವರು ಪ್ರಶ್ನಿಸಿದ್ದಾರೆ.
ಅಭಿಮಾನಿಗಳ ತಿರುಗೇಟು : ಒಂದೆಡೆ, ಟ್ರೋಲಿಗರು ದೀಪಿಕಾರನ್ನು ಟೀಕಿಸುತ್ದಿದ್ದರೆ, ಮತ್ತೊಂದೆಡೆ ದೀಪಿಕಾ ಅವರ ಅಭಿಮಾನಿಗಳು ತಕ್ಷಣವೇ ಅವರ ಬೆಂಬಲಕ್ಕೆ ನಿಂತಿದ್ದಾರೆ. ಶೇಖ್ ಜಾಯೆದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡುವ ಪ್ರತಿಯೊಬ್ಬ ಮಹಿಳೆಯೂ ಉದ್ದನೆಯ, ಸಡಿಲವಾದ ಉಡುಪು ಮತ್ತು ಶಿರಸ್ತ್ರಾಣ ಧರಿಸುವುದು ಕಡ್ಡಾಯವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

“ಇತರ ದೇಶದ ಸಂಸ್ಕೃತಿಗೆ ಗೌರವ ನೀಡುವುದರಲ್ಲಿ ತಪ್ಪೇನಿದೆ? ವಿದೇಶಿ ಪ್ರವಾಸಿಗರು ನಮ್ಮ ದೇವಾಲಯಗಳಿಗೆ ಭೇಟಿ ನೀಡಿದಾಗ ನಾವು ಸಭ್ಯ ಉಡುಪು ಧರಿಸಬೇಕೆಂದು ನಿರೀಕ್ಷಿಸುತ್ತೇವೆ. ಹಾಗೆಯೇ ದೀಪಿಕಾ ಕೂಡ ಮಾಡಿದ್ದಾರೆ” ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ, “ದೀಪಿಕಾ ಮತ್ತು ರಣವೀರ್ ಈ ಹಿಂದೆ ತಿರುಮಲ, ಸ್ವರ್ಣ ಮಂದಿರ, ಮತ್ತು ಸಿದ್ಧಿವಿನಾಯಕ ದೇವಾಲಯಗಳಿಗೆ ಭೇಟಿ ನೀಡಿದಾಗಲೂ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ, ತಲೆಗೆ ಬಟ್ಟೆ ಕಟ್ಟಿಕೊಂಡು ಗೌರವ ಸಲ್ಲಿಸಿದ್ದರು. ಆಗ ಯಾರಿಗೂ ಇಲ್ಲದ ಸಮಸ್ಯೆ ಈಗೇಕೆ?” ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ‘ಪಠಾಣ್’ ಚಿತ್ರದ ‘ಬೇಷರಂ ರಂಗ್’ ಹಾಡಿನಲ್ಲಿ ಧರಿಸಿದ್ದ ಬಿಕಿನಿಯಿಂದಲೂ ದೀಪಿಕಾ ವಿವಾದಕ್ಕೆ ಗುರಿಯಾಗಿದ್ದರು. ಆದರೆ, ಈ ಹೊಸ ಟ್ರೋಲ್‌ಗಳ ಬಗ್ಗೆ ದೀಪಿಕಾ ಪಡುಕೋಣೆ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.