ಕರೂರ್: ತಮಿಳುನಾಡಿನ ಕರೂರ್ ಸಮಾವೇಶದ ವೇಳೆ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟ 39 ಸಂತ್ರಸ್ತರ ಕುಟುಂಬಗಳಿಗೆ ಟಿವಿಕೆ ಪಕ್ಷದ ನಾಯಕ, ನಟ ವಿಜಯ್ ಅವರು ಇಂದು ತಲಾ 20 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಅಲ್ಲದೆ, ದುರಂತದಲ್ಲಿ ಗಾಯಗೊಂಡಿರುವ ಸುಮಾರು 100 ಜನರಿಗೆ ತಲಾ 2 ಲಕ್ಷ ರೂಪಾಯಿ ನೀಡುವುದಾಗಿ ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ತಿಳಿಸಿದೆ.
ಶನಿವಾರ ಸಂಜೆ ತಮಿಳುನಾಡಿನ ಕರೂರಿನಲ್ಲಿ ನಡೆದ ಟಿವಿಕೆ ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದ ನಂತರ ವಿಜಯ್ ಈ ಘೋಷಣೆ ಮಾಡಿದ್ದಾರೆ. ಈ ಘಟನೆಯು ತಮಿಳುನಾಡಿನಲ್ಲಿ ದೊಡ್ಡ ಆಘಾತವನ್ನುಂಟುಮಾಡಿದೆ.
ತಮ್ಮ ಪಕ್ಷದ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಜಯ್ ತಮ್ಮ ಎರಡನೇ ಸಂತಾಪ ಸೂಚಕ ಸಂದೇಶವನ್ನು ಹಂಚಿಕೊಂಡಿದ್ದಾರೆ. “ನನ್ನ ಹೃದಯದಲ್ಲಿನ ನೋವನ್ನು ವ್ಯಕ್ತಪಡಿಸಲು ಪದಗಳು ಸಿಗುತ್ತಿಲ್ಲ. ನನ್ನ ಪ್ರೀತಿಪಾತ್ರರನ್ನು ಕಳೆದುಕೊಂಡ ದುಃಖದಲ್ಲಿರುವ ನಿಮ್ಮೊಂದಿಗೆ ನಾನೂ ಈ ನೋವನ್ನು ಹಂಚಿಕೊಳ್ಳುತ್ತೇನೆ. ಇದು ನಿಜಕ್ಕೂ ನಮಗೆ ತುಂಬಲಾರದ ನಷ್ಟ. ಯಾರು ಎಷ್ಟೇ ಸಮಾಧಾನ ಹೇಳಿದರೂ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವು ಅಸಹನೀಯವಾದುದು. ನಿಮ್ಮ ಕುಟುಂಬದ ಸದಸ್ಯನಾಗಿ, ಮೃತರ ಕುಟುಂಬಕ್ಕೆ ತಲಾ 20 ಲಕ್ಷ ರೂ. ಮತ್ತು ಗಾಯಾಳುಗಳಿಗೆ 2 ಲಕ್ಷ ರೂಪಾಯಿ ನೀಡುವುದು ನನ್ನ ಕರ್ತವ್ಯ” ಎಂದು ಅವರು ಹೇಳಿದ್ದಾರೆ.
ಆದಾಗ್ಯೂ, ತಮ್ಮ ಸಮಾವೇಶಗಳಲ್ಲಿನ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಪೊಲೀಸ್ ಷರತ್ತುಗಳನ್ನು ಉಲ್ಲಂಘಿಸಿರುವ ಆರೋಪಗಳ ಬಗ್ಗೆ ವಿಜಯ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ, ಇದು ತೀವ್ರ ಟೀಕೆಗೆ ಗುರಿಯಾಗಿದೆ.
ಸರ್ಕಾರದಿಂದ ತಲಾ 10 ಲಕ್ಷ ರೂ. ಪರಿಹಾರ
ಈ ದುರಂತಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಮತ್ತು ಪ್ರಧಾನಮಂತ್ರಿ ಕಾರ್ಯಾಲಯವೂ ಪರಿಹಾರವನ್ನು ಘೋಷಿಸಿದೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನೇತೃತ್ವದ ತಮಿಳುನಾಡು ಡಿಎಂಕೆ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 1 ಲಕ್ಷ ರೂಪಾಯಿ ಪರಿಹಾರ ಪ್ರಕಟಿಸಿದೆ.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ದುರಂತದ ಹಿನ್ನೆಲೆ
ಕರೂರು ಸಮಾವೇಶಕ್ಕೆ ಸುಮಾರು 10,000 ಜನರು ಸೇರುವ ನಿರೀಕ್ಷೆಯಿತ್ತು, ಆದರೆ 27,000ಕ್ಕೂ ಹೆಚ್ಚು ಜನರು ಸೇರಿದ್ದರು. ವಿಜಯ್ ಅವರ ಆಗಮನವು ಸುಮಾರು ಏಳು ಗಂಟೆಗಳ ಕಾಲ ವಿಳಂಬವಾಗಿದ್ದರಿಂದ ಜನಸಂದಣಿ ಹೆಚ್ಚಾಯಿತು. ಸ್ಥಳದಲ್ಲಿ ಕುಡಿಯುವ ನೀರು ಮತ್ತು ಆಹಾರದ ಕೊರತೆಯೂ ಇತ್ತು. ಈ ಬೃಹತ್ ಜನಸ್ತೋಮವನ್ನು ನಿಯಂತ್ರಿಸಲು ಕೇವಲ 500 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ತಮಿಳುನಾಡು ಡಿಜಿಪಿ ಒಪ್ಪಿಕೊಂಡಿದ್ದಾರೆ. ಘಟನೆಯ ತನಿಖೆಗಾಗಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿವೃತ್ತ ನ್ಯಾಯಮೂರ್ತಿ ಅರುಣಾ ಜಗದೀಸನ್ ನೇತೃತ್ವದಲ್ಲಿ ನ್ಯಾಯಾಂಗ ಆಯೋಗವನ್ನು ರಚಿಸಿದ್ದಾರೆ.



















