ಚೆನ್ನೈ : ತಮಿಳುನಾಡಿನ ಕರೂರಿನಲ್ಲಿ ಇತ್ತೀಚೆಗೆ ತಮ್ಮ ಪಕ್ಷದ ರ‍್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಕುಟುಂಬ ಸದಸ್ಯರನ್ನು ನಟ-ರಾಜಕಾರಣಿ ವಿಜಯ್ ಅವರು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಸಾಂತ್ವನ ಹೇಳಿದ್ದಾರೆ. “ನಾನು ನಿಮ್ಮೊಂದಿಗಿದ್ದೇನೆ” ಎಂದು ಅವರು ಭರವಸೆ ನೀಡಿದ್ದು, ಸದ್ಯ ಕೆಲವು ಕಷ್ಟಗಳಿಂದಾಗಿ ಖುದ್ದಾಗಿ ನಿಮ್ಮನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಪಕ್ಷದ ಮುಖ್ಯಸ್ಥರಾದ ವಿಜಯ್, ದುರಂತದಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡ 4-5 ಕುಟುಂಬಗಳೊಂದಿಗೆ ಈವರೆಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಕಾಲ್ತುಳಿತಕ್ಕೆ ಬಲಿಯಾದ ಎಮೂರ್ ಪುದೂರ್‌ನ ನಿವಾಸಿ ಕೆ. ಶಕ್ತಿವೇಲು ಅವರ ಪತ್ನಿ ಪ್ರಿಯದರ್ಶಿನಿ(35) ಮತ್ತು ಮಗಳು ಧರಣಿಕ(14) ಜತೆಗೆ ಮಾತನಾಡಿರುವ ವಿಜಯ್, ನಿಮಗಾದ ನಷ್ಟವನ್ನು ಭರಿಸಿಕೊಡಲು ಸಾಧ್ಯವಿಲ್ಲ. ಈ ಘಟನೆಯಿಂದ ನನಗೆ ಅತೀವ ನೋವಾಗಿದೆ. ಆದಷ್ಟು ಬೇಗ ನಿಮ್ಮನ್ನು ನಾನು ಭೇಟಿಯಾಗುತ್ತೇನೆ ಎಂದಿದ್ದಾರೆ.
ವಿಜಯ್ ಅವರು 2 ನಿಮಿಷಗಳ ಕಾಲ ನಮ್ಮಲ್ಲಿ ಮಾತನಾಡಿದರು. ಇನ್ನೇನಾದರೂ ಅಗತ್ಯವಿದ್ದರೆ ಅವರು ಖುದ್ದು ಭೇಟಿಗೆ ಬಂದಾಗ ತಿಳಿಸುವಂತೆ ಪಕ್ಷದ ಪದಾಧಿಕಾರಿಗಳು ನಮಗೆ ಸೂಚಿಸಿದರು ಎಂದು ಪ್ರಿಯದರ್ಶಿನಿಯವರು ಹೇಳಿದ್ದಾರೆ. ಇವರಷ್ಟೇ ಅಲ್ಲದೆ, ಪುದುಪಟ್ಟಿಯ ಎಸ್. ಸುಧಾನ್ ಅವರೊಂದಿಗೂ ವಿಜಯ್ ಮಾತನಾಡಿ, ಸಾಂತ್ವನ ಹೇಳಿದ್ದಾರೆ. ಕಾಲ್ತುಳಿತದ ವೇಳೆ ಸುಧಾನ್ ಅವರ 22 ವರ್ಷದ ಪತ್ನಿ ಬೃಂದಾ ಮೃತಪಟ್ಟಿದ್ದಾರೆ.
ಏನಿದು ಕರೂರು ದುರಂತ? ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ವಿಜಯ್ ಅವರ ಪಕ್ಷವು ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಏಕಾಏಕಿ ಸಂಭವಿಸಿದ ಕಾಲ್ತುಳಿತದಲ್ಲಿ 41 ಜನರು ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ತಮಿಳುನಾಡು ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿರುವಂತೆಯೇ ಈ ಘಟನೆ ನಡೆದ ಕಾರಣ, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಮಾವೇಶಕ್ಕೆ ಮಧ್ಯಾಹ್ನ 12 ಗಂಟೆಗೆ ಬರಬೇಕಿದ್ದ ವಿಜಯ್, ಸಂಜೆ 7 ಗಂಟೆಗೆ ಆಗಮಿಸಿದ್ದು, ಅವರು ಬರುವಾಗ ಸುಮಾರು ಏಳು ಗಂಟೆಗಳ ಕಾಲ ವಿಳಂಬವಾಗಿದ್ದು, ಕೇವಲ 2,000-3,000 ಜನರಿಗೆ ಮೀಸಲಾಗಿದ್ದ ಸ್ಥಳದಲ್ಲಿ 30,000ಕ್ಕೂ ಹೆಚ್ಚು ಜನರು ಸೇರಿದ್ದು, ವಿಜಯ್ ತಮ್ಮ ಪ್ರಚಾರ ವಾಹನದ ಮೇಲೆ ಹತ್ತಿ ಜನರತ್ತ ಕೈಬೀಸಿದಾಗ, ಅವರನ್ನು ನೋಡಲು ಜನಸಮೂಹ ಮುಂದಕ್ಕೆ ನುಗ್ಗಿದ್ದು ಮುಂತಾದ ಹಲವು ಕಾರಣಗಳಿಂದ ಕಾಲ್ತುಳಿತ ಸಂಭವಿಸಿದೆ ಎಂದು ವಿಶ್ಲೇಷಿಸಲಾಗಿದೆ.