ಬೆಂಗಳೂರು: ರಾಜ್ಯದ 15 ಜಿಲ್ಲೆಗಳ 27 ತಾಲೂಕುಗಳಲ್ಲಿನ ಅಂತರ್ಜಲ ಅತಿಬಳಕೆಯ ಪಟ್ಟಿಯಲ್ಲಿರುವ 525 ಗ್ರಾಮ ಪಂಚಾಯಿತಿಗಳಲ್ಲಿ “ನೀರಿದ್ದರೆ ನಾಳೆ” ಯೋಜನೆಯನ್ನು ಮೊದಲ ಹಂತದಲ್ಲಿ ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ನಟ ವಶಿಷ್ಟ ಸಿಂಹ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಚಾಲನೆ ನೀಡಲಿದ್ದಾರೆ ಎಂದು ಸಣ್ಣ ನೀರಾವರಿ ಇಲಾಖೆಯ ಸಚಿವ ಎನ್.ಎಸ್ ಭೋಸರಾಜು ತಿಳಿಸಿದ್ದಾರೆ.
ವಿಕಾಸಸೌಧದ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಭೋಸರಾಜು, ಕನ್ನಡ ಚಿತ್ರರಂಗದ ಖ್ಯಾತ ನಟ ವಶಿಷ್ಟ ಸಿಂಹ ಅವರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ. ಇಂದು ವಿಧಾನಸೌಧದ ಬ್ವಾಂಕ್ವೆಟ್ ಹಾಲ್ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ರಾಜ್ಯದಲ್ಲಿ ಅಂತರ್ಜಲ ಸಾಕ್ಷರತೆಗೆ ಒತ್ತು ನೀಡುವ ಗುರಿಯನ್ನು ಹೊಂದಲಾಗಿದೆ ಎಂದಿದ್ದಾರೆ.
ಪ್ರಕೃತಿಯಿಂದ ವರದಾನವಾಗಿ ಬಂದಿರುವ ನೈಸರ್ಗಿಕ ಹಾಗೂ ನಮ್ಮ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ “ನೀರಿದ್ದರೆ ನಾಳೆ” ಎನ್ನುವ ವಿನೂತನ ಕಾರ್ಯಕ್ರಮವನ್ನು ರೂಪಿಸಲಾಗಿದೆ. ನೀರಿದ್ದರೆ ನಾಳೆ ಎನ್ನುವ ವಿಶೇಷ ಪರಿಕಲ್ಪನೆಯ ಕಾರ್ಯಕ್ರಮದ ಮೂಲಕ ನೀರಿನ ಮಹತ್ವವನ್ನು ತಿಳಿಸುವುದು, ರಾಜ್ಯದ ಜಲ ಮೂಲಗಳ ಸಂರಕ್ಷಣೆಗೆ ಯೋಜನೆ ರೂಪಿಸುವುದು, ನಾಗರಿಕರನ್ನು ನೀರಿನ ಸಂರಕ್ಷಣೆಯ ಅಭಿಯಾನದಲ್ಲಿ ಪಾಲುದಾರರನ್ನಾಗಿ ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಮೊದಲ ಹಂತದಲ್ಲಿ ರಾಜ್ಯದ 16 ಜಿಲ್ಲೆಗಳ 27 ತಾಲೂಕುಗಳ 525 ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈ ಪೈಕಿ ಕಲ್ಯಾಣ ಕರ್ನಾಟಕ ಭಾಗದ 100ಕ್ಕೂ ಹೆಚ್ಚು ಅಂತರ್ಜಲ ಅತಿಬಳಕೆ ಗ್ರಾಮ ಪಂಚಾಯತಿಗಳಿವೆ ಎಂದು ಮಾಹಿತಿ ನೀಡಿದ್ದಾರೆ.