ಬೆಂಗಳೂರು:ನಟ ದರ್ಶನ್ ಈಗಾಗಲೇ ಶಸ್ತ್ರ ಚಿಕಿತ್ಸೆಗೆಂದು ಜಾಮೀನು ಪಡೆದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಇದುವರೆಗೂ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿಲ್ಲ. ಈ ಮಧ್ಯೆ ಅವರಿಗೆ ಶಾಕ್ ಕೊಡಲು ಪೊಲೀಸರು ಮುಂದಾಗಿದ್ದಾರೆ.
ನಟ ದರ್ಶನ್ ಗೆ ನೀಡಿರುವ ಮಧ್ಯಂತರ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ಪೊಲೀಸರು ಅಗತ್ಯ ತಯಾರಿ ನಡೆಸಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿರುವ ಪೊಲೀಸರು, ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ಗೃಹ ಇಲಾಖೆಗೆ ಪತ್ರ ಬರೆದು ಮನವಿ ಮಾಡಲಾಗಿತ್ತು. ಗೃಹ ಇಲಾಖೆ ಕೂಡ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗುತ್ತಿದೆ.
ಈ ಕುರಿತು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಮಾತನಾಡಿ, ದರ್ಶನ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅಗತ್ಯ ದಾಖಲೆ, ಕಾಗದ ಪತ್ರಗಳನ್ನು ಸಿದ್ಧ ಮಾಡಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಚಾರ್ಜ್ ಶೀಟ್ ನ್ನು ಭಾಷಾಂತರ ಮಾಡುವ ಕೆಲಸ ನಡೆದಿದೆ. ಸದ್ಯದಲ್ಲೇ ಅರ್ಜಿ ಸಲ್ಲಿಸಲಾಗುವುದು ಎಂದಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮೂರು ತಿಂಗಳಿಗೂ ಅಧಿಕ ಕಾಲ ಜೈಲಿನಲ್ಲಿದ್ದ ಆರೋಪಿ ದರ್ಶನ್ ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅಕ್ಟೋಬರ್ 30 ಕ್ಕೆ ಹೈಕೋರ್ಟ್ ಆರು ವಾರಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ಈಗಾಗಲೇ ಅರ್ಧದಷ್ಟು ದಿನಗಳು ಮುಕ್ತಾಯವಾಗಿವೆ. ಮುಂದಿನ ಮೂರು ವಾರಗಳ ನಂತರ ಅವರು ಜೈಲು ಸೇರಬೇಕಾಗುತ್ತದೆ.