ವೃದ್ಧಾಶ್ರಮ ಸೇರಿದ್ದ ನಟಿ ಶೈಲಶ್ರೀ ಬದುಕಿಗೆ ನಟ ದರ್ಶನ್ ಆಸರೆಯಾಗಿದ್ದು, ಎಲ್ಲೆಡೆ ಪ್ರಶಂಸೆಗೆ ಪಾತ್ರರಾಗುತ್ತಿದ್ದಾರೆ.
ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡಿದ್ದ ಹಿರಿಯ ನಟಿಗೆ ದಯನೀಯ ಸ್ಥಿತಿ ಎದುರಾಗಿದೆ. ಅವರಿಗೆ ಯಾರ ಆಸರೆಯೂ ಇಲ್ಲದ ಹಿನ್ನೆಲೆಯಲ್ಲಿ ಶೈಲಶ್ರೀ ಸುದರ್ಶನ್ (Shailashri Sudarshan) ವೃದ್ಧಾಶ್ರಮ ಸೇರಿದ್ದರು. ಅವರಿಗೆ ನಟ ದರ್ಶನ್ ಆಸರೆಯಾಗಿದ್ದು, ಬಾಡಿಗೆ ಮನೆ ಮಾಡಿದರೆ, ನಿಮ್ಮ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ, ಸಹೋದರನ ಮೂಲಕ ನಟಿಗೆ 50 ಸಾವಿರ ರೂ. ಸಹಾಯ ಮಾಡಿದ್ದಾರೆ. ಇದರೊಂದಿಗೆ ಅಗತ್ಯ ವಸ್ತುಗಳನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೆ ಚಂದನವನದಲ್ಲಿ ಖಳನಟನಾಗಿ ಮಿಂಚಿದ್ದ ಸುದರ್ಶನ್ ಅವರ ಪತ್ನಿ ಹಿರಿಯ ನಟಿ ಶೈಲಶ್ರೀ ಅವರು ಸ್ವಂತ ಮನೆಯಿಲ್ಲದೇ ವೃದ್ಧಾಶ್ರಮ ಸೇರಿದ್ದರು. ಹಿರಿಯ ನಟಿ ಕಷ್ಟವನ್ನು ಅರಿತು ನಟ ದರ್ಶನ್ (Darshan) ಮಾನವೀಯತೆ ಮೆರೆದಿದ್ದಾರೆ. ಶೈಲಶ್ರೀ ಅವರು 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಜೀವಿ ಆಶ್ರಯ ಇಲ್ಲದೇ ಬೆಂಗಳೂರಿನ ‘ಮಡಿಲು’ ವೃದ್ಧಾಶ್ರಮ ಸೇರಿದ್ದರು. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್ ಸಹಾಯ ಮಾಡಿದ್ದಾರೆ.