ಮುಂಬೈ: ಬಾಲಿವುಡ್‌ನ ಹಿರಿಯ ನಟ ಮತ್ತು ಹಾಸ್ಯ ಕಲಾವಿದ ಗೋವರ್ಧನ್ ಅಸ್ರಾನಿ (84) ಅವರು ಅಕ್ಟೋಬರ್ 20ರ ಸೋಮವಾರ ನಿಧನರಾಗಿದ್ದು, ತಮ್ಮ ಸರಳ ಮತ್ತು ಗೌರವಾನ್ವಿತ ಅಂತ್ಯಕ್ರಿಯೆಯ ಬಗ್ಗೆ ಅವರು ಹೊಂದಿದ್ದ ಅಂತಿಮ ಇಚ್ಛೆಯನ್ನು ಅವರ ಪತ್ನಿ ಮಂಜು ಅಸ್ರಾನಿ ನೆರವೇರಿಸಿದ್ದಾರೆ.
ಅಸ್ರಾನಿ ಅವರ ಅಂತಿಮ ಇಚ್ಛೆ ಏನಾಗಿತ್ತು?
ಅನಾರೋಗ್ಯದಿಂದ ಮುಂಬೈನ ಜುಹುವಿನಲ್ಲಿರುವ ಆರೋಗ್ಯ ನಿಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಸ್ರಾನಿ, ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದ್ದರಿಂದ ಸೋಮವಾರ ಸಂಜೆ ಕೊನೆಯುಸಿರೆಳೆದರು. ತಮ್ಮ ಸಾವಿನ ನಂತರ ಯಾವುದೇ ಸಾರ್ವಜನಿಕ ಗದ್ದಲ ಅಥವಾ ಮಾಧ್ಯಮಗಳ ವೈಭವೀಕರಣ ಇರಬಾರದು. ನಾನು ಮೌನವಾಗಿ ಹಾಗೂ ಅತ್ಯಂತ ಘನತೆಯಿಂದ ಈ ಜಗತ್ತನ್ನು ಬಿಟ್ಟು ಹೋಗಲು ಬಯಸುತ್ತೇನೆ. ನನ್ನ ಖ್ಯಾತಿಯ ಹೊರತಾಗಿಯೂ ನಾನೊಬ್ಬ ಸಾಮಾನ್ಯ ವ್ಯಕ್ತಿಯಾಗಿ ನೆನಪಲ್ಲಿ ಉಳಿಯಲು ಇಚ್ಛಿಸುತ್ತೇನೆ ಎಂದು ಅಸ್ರಾನಿ ತಮ್ಮ ಪತ್ನಿ ಮಂಜು ಅವರಿಗೆ ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ, ಅವರ ಅಂತ್ಯಕ್ರಿಯೆಯನ್ನು ಸೋಮವಾರ ಸಂಜೆ ಸಾಂತಾಕ್ರೂಜ್ ಚಿತಾಗಾರದಲ್ಲಿ ಕೇವಲ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಸಲಾಯಿತು. ಅಂತ್ಯಕ್ರಿಯೆಯ ನಂತರವಷ್ಟೇ ಅವರ ಸಾವಿನ ಸುದ್ದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಯಿತು.

ಐದು ದಶಕಗಳ ಸಿನಿಪಯಣ
ಐದು ದಶಕಗಳಿಗೂ ಹೆಚ್ಚು ಕಾಲ ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅಸ್ರಾನಿ, 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (FTII) ಪದವೀಧರರಾದ ಅವರು, 1960ರ ದಶಕದ ಮಧ್ಯಭಾಗದಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹಾಸ್ಯ ಪಾತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅಸ್ರಾನಿ, 1970 ಮತ್ತು 80ರ ದಶಕಗಳಲ್ಲಿ ಮನೆಮಾತಾಗಿದ್ದರು.
ಪ್ರಮುಖ ಚಿತ್ರಗಳು:
‘ಶೋಲೆ’ ಚಿತ್ರದ ಜೈಲರ್ ಪಾತ್ರವು ಅವರ ವೃತ್ತಿಜೀವನದಲ್ಲಿ ಅಪ್ರತಿಮವೆನಿಸಿದೆ. ಇದಲ್ಲದೆ ‘ಚುಪ್ಕೆ ಚುಪ್ಕೆ’, ‘ಆಜ್ ಕಿ ತಾಜಾ ಖಬರ್’, ಮತ್ತು ‘ಚಲಾ ಮುರಾರಿ ಹೀರೋ ಬನ್ನೆ’ ಮುಂತಾದ ಚಿತ್ರಗಳಲ್ಲಿನ ಅವರ ಅಭಿನಯ ಸ್ಮರಣೀಯ.ಹಿಂದಿ ಮಾತ್ರವಲ್ಲದೆ, ಗುಜರಾತಿ ಮತ್ತು ರಾಜಸ್ಥಾನಿ ಚಿತ್ರಗಳಲ್ಲಿಯೂ ನಟಿಸಿದ್ದರು. ಕೆಲವು ಹಿಂದಿ ಮತ್ತು ಗುಜರಾತಿ ಚಿತ್ರಗಳನ್ನು ನಿರ್ದೇಶಿಸಿದ್ದರು.
ನಿಧನರಾಗುವ ಕೆಲವೇ ಗಂಟೆಗಳ ಮೊದಲು, ಅಸ್ರಾನಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ “ಹ್ಯಾಪಿ ದೀಪಾವಳಿ” ಎಂದು ಬರೆದು ಶುಭ ಕೋರಿದ್ದರು. ಇದು ಅವರ ಅಭಿಮಾನಿಗಳನ್ನು ಮತ್ತಷ್ಟು ಆಘಾತಕ್ಕೆ ದೂಡಿದೆ.