ದಾವಣಗೆರೆ: ಲಾಕಪ್ ಡೆತ್ (LockupDeath) ಆಗಿದೆ ಎಂದು ಆರೋಪಿಸಿ ಮೃತನ ಸಂಬಂಧಿಕರು ಚನ್ನಗಿರಿ ಪೊಲೀಸ್ ಠಾಣೆ (Channagiri Police Station)ಗೆ ನುಗ್ಗಿ ಕಲ್ಲು ತೂರಾಟ ನಡೆಸಿದ್ದು, 11 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ, 10ಕ್ಕೂ ಅಧಿಕ ಪೊಲೀಸ್ ವ್ಯಾನ್ ಗಳು ಜಖಂ ಆಗಿವೆ.
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಉಮಾ ಪ್ರಶಾಂತ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ಸಾವನ್ನಪ್ಪಿರುವ ಆದಿಲ್ ನನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದರು. ಆದರೆ, ಅಲ್ಲಿ ಆದಿಲ್ ಕುಸಿದು ಬಿದ್ದಿದ್ದಾನೆ. ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತ ಆದಿಲ್ ಪೊಲೀಸ್ ಠಾಣೆಯಲ್ಲಿ ಆರೇಳು ನಿಮಿಷ ಕೂಡ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಇದಕ್ಕೆ ಮೃತನ ಕುಟುಂಬಸ್ಥರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ಸಿಸಿ ಕ್ಯಾಮರಾ ಇದೆ. ಎಲ್ಲ ಪರಿಶೀಲನೆ ಮಾಡಲಾಗುತ್ತಿದೆ. ಪ್ರಮಾಣಿಕ ತನಿಖೆ ಮಾಡುತ್ತೇವೆ. ಮೃತರ ತಂದೆ ದೂರು ಕೊಟ್ಟಿದ್ದಾರೆ. ತನಿಖೆ ನಡೆಯುತ್ತದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ಕಲ್ಲು ತೂರಾಟದಲ್ಲಿ 7 ಪೊಲೀಸ್ ವಾಹನ ಹಾಗೂ 11 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.