ಘಾಜಿಯಾಬಾದ್ : ಉತ್ತರ ಪ್ರದೇಶದ ಘಾಜಿಯಾಬಾದ್‌ನಲ್ಲಿ ಮಾಜಿ ಮುಸ್ಲಿಂ ಯೂಟ್ಯೂಬರ್ ಸಲೀಂ ವಾಸ್ತಿಕ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣದ ಪ್ರಮುಖ ಆರೋಪಿ ಝೀಶನ್ ಎಂಬಾತನನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ್ದಾರೆ. ಭಾನುವಾರ ನಡೆದ ಗುಂಡಿನ ಚಕಮಕಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಆರೋಪಿಯು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಕಳೆದ ಶುಕ್ರವಾರ (ಫೆಬ್ರವರಿ 27) ಘಾಜಿಯಾಬಾದ್‌ನ ಲೋನಿ ಪ್ರದೇಶದ ಅಶೋಕ್ ವಿಹಾರ್ ಕಾಲೋನಿಯಲ್ಲಿರುವ ಸಲೀಂ ವಾಸ್ತಿಕ್ ಅವರ ನಿವಾಸಕ್ಕೆ ಹೆಲ್ಮೆಟ್ ಧರಿಸಿ ನುಗ್ಗಿದ್ದ ಇಬ್ಬರು ದುಷ್ಕರ್ಮಿಗಳು, ಸಲೀಂ ಅವರ ಕುತ್ತಿಗೆ ಮತ್ತು ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿದ್ದರು. ಸದ್ಯ ಸಲೀಂ ಅವರನ್ನು ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇಸ್ಲಾಂ ಧರ್ಮದ ಕುರಿತು ವಿಮರ್ಶಾತ್ಮಕ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದ ಸಲೀಂ ಅವರ ಮೇಲೆ ನಡೆದ ಈ ದಾಳಿಯು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿತ್ತು.
ಯೋಗಿ ಆದಿತ್ಯನಾಥ್ ಸೂಚನೆ ಬೆನ್ನಲ್ಲೇ ಎನ್‌ಕೌಂಟರ್
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಆರೋಪಿಗಳ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳುವಂತೆ ಮತ್ತು ಹಲ್ಲೆಕೋರರನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಘಾಜಿಯಾಬಾದ್ ಪೊಲೀಸರು ಹತ್ತು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ಆರಂಭಿಸಿದ್ದರು. ಭಾನುವಾರ ಅಮ್ರೋಹ ನಿವಾಸಿಯಾದ ಝೀಶನ್‌ನನ್ನು ಪೊಲೀಸರು ಬೆನ್ನಟ್ಟಿದಾಗ ಗುಂಡಿನ ಚಕಮಕಿ ನಡೆದಿದೆ. ಈ ವೇಳೆ ಝೀಶನ್ ಎರಡು ಗುಂಡೇಟು ತಗುಲಿ ಕುಸಿದುಬಿದ್ದಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲೀಂ ವಾಸ್ತಿಕ್ ಅವರು ‘Ex-Muslim'(ಮಾಜಿ ಮುಸ್ಲಿಂ) ಎಂಬ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಂ ಧರ್ಮದ ಬಗ್ಗೆ ತಮ್ಮ ವಿಮರ್ಶಾತ್ಮಕ ನಿಲುವುಗಳನ್ನು ಬಹಿರಂಗವಾಗಿ ಹಂಚಿಕೊಳ್ಳುತ್ತಿದ್ದರು. ಇದೇ ಕಾರಣಕ್ಕೆ ಅವರ ಮೇಲೆ ದಾಳಿ ನಡೆದಿದೆ ಎಂದು ಹಲವು ಸಂಘಟನೆಗಳು ಆರೋಪಿಸಿವೆಯಾದರೂ, ಪೊಲೀಸರು ದಾಳಿಯ ಹಿಂದಿನ ಅಧಿಕೃತ ಉದ್ದೇಶವನ್ನು ಇನ್ನೂ ದೃಢಪಡಿಸಿಲ್ಲ. ಸಲೀಂ ಪುತ್ರ ಉಸ್ಮಾನ್ ನೀಡಿದ ದೂರಿನ ಮೇರೆಗೆ ಈಗಾಗಲೇ ಏಳು ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಉಳಿದ ಆರೋಪಿಗಳ ಪತ್ತೆಗಾಗಿ ದೆಹಲಿ ಮತ್ತು ಘಾಜಿಯಾಬಾದ್‌ನ ಹಲವೆಡೆ ಪೊಲೀಸರ ತಂಡಗಳು ದಾಳಿ ಮುಂದುವರಿಸಿವೆ.
ಇದನ್ನೂ ಓದಿ : ಭುಗಿಲೆದ್ದ ಯುದ್ಧ | ಕುವೈತ್‌ನಲ್ಲಿ ಅಮೆರಿಕದ F-15 ಫೈಟರ್ ಜೆಟ್ ಪತನ.. ಇರಾನ್‌ನಿಂದ ಪ್ರತೀಕಾರದ ದಾಳಿ!



















