ಲಖಿಂಪುರ: ಕಳ್ಳತನದ ಆರೋಪಿಯೊಬ್ಬ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದು, ಆಸ್ಸಾಂನ ಲಖೀಂಪುರದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮೊಬೈಲ್ ಕಳ್ಳತನ ಆರೋಪಿಯೇ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಸಾವನ್ನಪ್ಪಿದ ಆರೋಪಿ ಸೇರಿದಂತೆ ನಾಲ್ವರನ್ನು ಅಲ್ಲಿನ ಖೇಲ್ಮತಿ ಪೊಲೀಸರು ಬಂಧಿಸಿದ್ದರು.
ಆದರೆ, ಓರ್ವ ಆರೋಪಿ ಸಾವನ್ನಪ್ಪಿದ್ದಾನೆ. ಹೀಗಾಗಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರ ಮಾಹಿತಿಯಂತೆ ಪೊಲೀಸ್ ಠಾಣೆಯ ಒಳಗೆ ಬೆಂಚಿನ ಮೇಲೆ ಕುಳಿತಿದ್ದ ಆರೋಪಿಯು ಹಠಾತ್ತನೆ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅಷ್ಟರಲ್ಲಾಗಲೇ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ.
ಪೊಲೀಸ್ ಠಾಣೆಯೊಳಗೆ ಸಾವು ಸಂಭವಿಸಿರುವುದರಿಂದ, ಎಎಸ್ಪಿ ಶ್ರೇಣಿಯ ಅಧಿಕಾರಿಯಿಂದ ಇಲಾಖಾ ವಿಚಾರಣೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.