ಬಳ್ಳಾರಿ: ಆಕಸ್ಮಿಕ ಬೆಂಕಿ (Fire) ತಗುಲಿ 200ಕ್ಕೂ ಅಧಿಕ ಶ್ರೀಗಂಧದ ಮರಗಳು (Sandalwood Trees) ಸುಟ್ಟು ಭಸ್ಮವಾಗಿರುವ ಘಟನೆ ನಡೆದಿದೆ.
ಈ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿಯಲ್ಲಿ ನಡೆದಿದೆ. ರೈತ ಚನ್ನಬಸಪ್ಪ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಈ ಅವಘಡ ಸಂಭವಿಸಿದೆ. ಚನ್ನಬಸಪ್ಪ ತನ್ನ 9 ಎಕರೆ ಜಮೀನಿನಲ್ಲಿ ಶ್ರೀಗಂಧ, ರಕ್ತಚಂದನ, ಪೇರಲೆ ಹಾಗೂ ಬಾಳೆ ಬೆಳೆ ಬೆಳೆದಿದ್ದರು.
ಚನ್ನಬಸಪ್ಪ 2018 ರಿಂದಲೇ ಸಸಿಗಳನ್ನು ಹಾಕಿ ಪೋಷಣೆ ಮಾಡುತ್ತಿದ್ದರು. ಇದೀಗ ಬೆಂಕಿ ತಗುಲಿ 200ಕ್ಕೂ ಅಧಿಕ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ 200ಕ್ಕೂ ಹೆಚ್ಚು ಮರಗಳಿಗೆ ಬೆಂಕಿ ತಗುಲಿ ಲಕ್ಷಾಂತರ ರೂ ನಷ್ಟ ಆಗಿದೆ. ಹೀಗಾಗಿ ಕುಟುಂಬಸ್ಥರು ಕಣ್ಣೀರು ಸುರಿಸುವಂತಾಗಿದೆ.