ಭಾರತ ಮತ್ತು ಜಿಂಬಾಬ್ವೆ ಮದ್ಯೆ ನಡೆಯುತ್ತಿರುವ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಪರಿಣಾಮವಾಗಿ ಭಾರತ ತಂಡ 2 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ, ಜಿಂಬಾಬ್ವೆಗೆ ಭಾರೀ ಟಾರ್ಗೆಟ್ ನೀಡಿದೆ.
ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಅಭಿಷೇಕ್ ಶರ್ಮಾ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಖಾತೆ ತೆರೆದಿದ್ದ ಅಭಿಷೇಕ್ ಶರ್ಮಾ, ಸತತ ಮೂರು ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಶತಕ ಪೂರೈಸಿದ ಸಾಧನೆ ಮಾಡಿದ್ದಾರೆ.
ಅಭಿಷೇಕ್ ಶರ್ಮಾ ತಮ್ಮ ವೃತ್ತಿಜೀವನದ ಎರಡನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿಯೇ ತಮ್ಮ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅದೂ ಕೇವಲ 46 ಎಸೆತಗಳಲ್ಲಿ 100 ರನ್ ಗಳಿಸಿದ ಅಭಿಷೇಕ್ ತಮ್ಮ ಈ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಏಳು ಬೌಂಡರಿ ಮತ್ತು ಎಂಟು ಸಿಕ್ಸರ್ ಸಿಡಿಸಿ ಈ ಸಾಧನೆ ಮಾಡಿದ್ದಾರೆ. ಅಲ್ಲದೇ, ಶರ್ಮಾ ಎರಡನೇ ವಿಕೆಟ್‌ಗೆ ಗಾಯಕ್ವಾಡ್ ಅವರೊಂದಿಗೆ 137 ರನ್‌ಗಳ ಜೊತೆಯಾಟವನ್ನು ನಡೆಸಿದರು.ಇದರೊಂದಿಗೆ ಅಭಿಷೇಕ್ ಶರ್ಮಾ ಭಾರತದ ಪರ ಟಿ20 ಅಂತಾರಾಷ್ಟ್ರೀಯ ಶತಕ ಸಿಡಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ನಂತರ, ಭಾರತದ ಪರ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ದಾಖಲೆಯೂ ಅವರ ಖಾತೆ ಸೇರಿಕೊಂಡಿದೆ. ಈ ಮೊದಲು ಈ ದಾಖಲೆ ದೀಪಕ್ ಹೂಡಾ ಹೆಸರಿನಲ್ಲಿತ್ತು. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ನಂತರ ಮೂರನೇ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದರು.
ಎಂದಿನಂತೆ ಈ ಪಂದ್ಯದಲ್ಲೂ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನಿಂಗ್ಸ್ ಆರಂಭಿಸಿದರು. ಆದರೆ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. 10 ರನ್ ಗಳಿಸುವಷ್ಟರಲ್ಲಿ ಶುಭ್‌ಮನ್ ಗಿಲ್ ರೂಪದಲ್ಲಿ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಕೆಟ್ಟ ಆರಂಭದ ನಂತರ, ಯುವ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ತಂಡದ ಇನ್ನಿಂಗ್ಸ್ ನಿಭಾಯಿಸಿ ತಮ್ಮ ಎರಡನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಶತಕ ಸಿಡಿಸಿದರು. ರುತುರಾಜ್ ಗಾಯಕ್ವಾಡ್ ಹಾಗೂ ರಿಂಕು ಸಿಂಗ್ ನಂತರ ಜಿಂಬಾಬ್ವೆ ಬೌಲರ್ ಗಳನ್ನು ಬೆಂಡೆತ್ತಿದರು. ರುತುರಾಜ್ ಗಾಯಕ್ವಾಡ್ ಔಟ್ ಆಗದೆ 47 ಎಸೆತಗಳಲ್ಲಿ 11 ಬೌಂಡರಿಗಳೊಂದಿಗೆ 1 ಸಿಕ್ಸರ್ ಸಿಡಿಸಿ 77 ರನ್ ಗಳಿಸಿದರೆ, ರಿಂಕ್ ಸಿಂಗ್ 22 ಎಸೆತಗಳಲ್ಲಿ 5 ಸಿಕ್ಸರ್ ಸಿಡಿಸಿ, 2 ಫೋರ್ ಗಳೊಂದಿಗೆ 48 ರನ್ ಗಳಿಸಿದ್ದಾರೆ. ಈ ಮೂಲಕ ಭಾರತ ತಂಡ ದಾಖಲೆಯ ಮೊತ್ತ ಪೇರಿಸಿದೆ.