ಕೋಲ್ಕತ್ತಾ: ಅಭಿಷೇಕ್ ಅಬ್ಬರದ ಬ್ಯಾಟಿಂಗ್, ವರುಣ್ ಚಕ್ರವರ್ತಿ ಬಿಗಿ ಬೌಲಿಂಗ್ ನಿಂದಾಗಿ ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಟಿ20ಯಲ್ಲಿ ಭಾರತ ತಂಡ 7 ರನ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ ಕೇವಲ 132 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 12.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಗೆ ಕಳಪೆ ಆರಂಭ ಸಿಕ್ಕಿತು. ಆರಂಭಿಕ ಆಟಗಾರ ಫಿಲ್ ಸಾಲ್ಟ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಬೆನ್ ಡಕೆಟ್ ಕೇವಲ 4 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೊಂದೆಡೆ ನಾಯಕ ಜೋಸ್ ಬಟ್ಲರ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. 44 ಬಾಲ್ ಗೆ 68 ರನ್ (8 ಫೋರ್, 2 ಸಿಕ್ಸರ್) ಗಳಿಸಿದರು. ಹ್ಯಾರಿ ಬ್ರೂಕ್ 17, ಜೋಫ್ರಾ ಆರ್ಚರ್ 12 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಭಾರತದ ಪರ ವರುಣ್ ಚಕ್ರವರ್ತಿ 3 ವಿಕೆಟ್ ಪಡೆದರೆ, ಅರ್ಶದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಅಭಿಷೇಕ್ ಶರ್ಮಾ ಭರ್ಜರಿ ಪ್ರದರ್ಶನ
ಸುಲಭ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಉತ್ತಮ ಆರಂಭ ಪಡೆದರು. ಸಂಜು 26 ರನ್ ಗಳಿಸಿ ಪೆವಿಲಿಯನ್ ಸೇರಿದರು. ಇನ್ನೊಂದೆಡೆ ಅಭಿಷೇಕ್ ಶರ್ಮಾ 34 ಬಾಲ್‌ಗೆ 79 ರನ್ (5 ಫೋರ್, 8 ಸಿಕ್ಸರ್) ಸಿಡಿಸಿ ಮಿಂಚಿದರು. ಸೂರ್ಯಕುಮಾರ್ ಯಾದವ್ ಶೂನ್ಯಕ್ಕೆ ಔಟ್ ಆಗಿ ಮತ್ತೊಮ್ಮೆ ಬೇಸರ ಮೂಡಿಸಿದರು. ತಿಲಕ್ ವರ್ಮಾ 19 ರನ್ ಗಳಿಸಿದರು.