ಬೆಂಗಳೂರು: ರೈಲು ಟಿಕೆಟ್ ಬುಕ್ಕಿಂಗ್ ಈಗ ಎಂದಿಗಿಂತ ತುಂಬ ಸುಲಭವಾಗಿದೆ. ಕೆಲವೇ ನಿಮಿಷಗಳಲ್ಲಿ ಆನ್ ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದರ ಬೆನ್ನಲ್ಲೇ, ರೈಲ್ವೆ ಇಲಾಖೆಯು ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಗೆ ಹೊಸ ನಿಯಮವನ್ನು ಜಾರಿಗೆ ತಂದಿದೆ. ಆನ್ ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಟಿಕೆಟ್ ಬುಕ್ ಮಾಡಲು ಇನ್ನುಮುಂದೆ ಆಧಾರ್ ಅಥೆಂಟಿಫಿಕೇಷನ್ ಕಡ್ಡಾಯವಾಗಿದೆ. ಹೊಸ ನಿಯಮವು ಅಕ್ಟೋಬರ್ 1ರಿಂದ ಜಾರಿಗೆ ಬರಲಿದೆ.
“ಐಆರ್ ಸಿಟಿಸಿ ಆ್ಯಪ್ ಮೂಲಕ ಅಕ್ಟೋಬರ್ 1ರಿಂದ ಜನರಲ್ ಟಿಕೆಟ್ ಬುಕ್ ಮಾಡುವವರಿಗೆ ಆಧಾರ್ ದೃಢೀಕರಣ ಕಡ್ಡಾಯವಾಗಲಿದೆ. ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಆರಂಭವಾದ ಮೊದಲ 15 ನಿಮಿಷಗಳಲ್ಲಿ ಬುಕ್ ಮಾಡುವವರಿಗೆ ಇದು ಅನ್ವಯವಾಗಲಿದೆ” ಎಂದು ರೈಲ್ವೆ ಸಚಿವಾಲಯ ಮಾಹಿತಿ ನೀಡಿದೆ. ಇದುವರೆಗೆ ತತ್ಕಾಲ್ ಟಿಕೆಟ್ ಬುಕ್ ಮಾಡುವವರಿಗೆ ಈ ನಿಯಮವಿತ್ತು.
ಮಧ್ಯವರ್ತಿಗಳ ಹಾವಳಿ ತಡೆಯಲು ಹೊಸ ನಿಯಮ ರೂಪಿಸಲಾಗಿದೆ. ಹೊಸ ನಿಯಮದ ಮೂಲಕ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗುತ್ತದೆ. ಅಲ್ಲದೆ, ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆಯನ್ನು ಖಚಿತಪಡಿಸುತ್ತದೆ. ಮಧ್ಯವರ್ತಿಗಳ ದುರುಪಯೋಗವನ್ನು ತಡೆಯುವುದರಿಂದ ಟಿಕೆಟ್ ಬುಕ್ಕಿಂಗ್ ಪ್ರಕ್ರಿಯೆ ಸರಳ, ಸುಲಭ ಮತ್ತು ವಿಶ್ವಾಸಾರ್ಹವಾಗುತ್ತದೆ ಎಂದು ತಿಳಿದುಬಂದಿದೆ.
ಟಿಕೆಟ್ ಬುಕ್ಕಿಂಗ್ ನಲ್ಲಿ ಮೋಸದ ಬುಕಿಂಗ್ ಗಳನ್ನು ಕಡಿಮೆ ಮಾಡುವುದು, ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆಯನ್ನು ಖಚಿತಪಡಿಸುವುದು ಮತ್ತು ಆನ್ ಲೈನ್ ವ್ಯವಸ್ಥೆಯನ್ನು ವಿಶ್ವಾಸಾರ್ಹವಾಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಸುಗಮವಾಗಿ ಯೋಜಿಸಿಕೊಳ್ಳಬಹುದು ಮತ್ತು ರೈಲ್ವೆ ಸೇವೆಗಳ ಮೇಲೆ ಜನರ ನಂಬಿಕೆ ಹೆಚ್ಚಾಗುತ್ತದೆ ಎಂದೇ ಹೇಳಲಾಗುತ್ತಿದೆ.



















