ಬೆಂಗಳೂರು: ಮದುವೆಗೆ ನಿರಾಕರಿಸಿದ ಯುವತಿಗೆ ಪ್ರಿಯಕರ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿರುವ ಘಟನೆಯೊಂದು ನಡೆದಿದೆ.
ನಗರದ ಜೆಜೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಜೆಜೆ ನಗರದ ಬಿನ್ನಿ ಲೇಔಟ್ ನಲ್ಲಿ ಈ ಘನಟೆ ನಡೆದಿದೆ. ಅಜಯ್(29) ಹತ್ಯೆಗೆ ಯತ್ನಿಸಿರುವ ಆರೋಪಿ ಎನ್ನಲಾಗಿದೆ. ಆರೋಪಿ ಅಜಯ್ ಕಳೆದ 8 ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯನ್ನು ಪ್ರೀತಿ ಮಾಡುತ್ತಿದ್ದ. ಹೀಗಾಗಿ ಪೋಕ್ಸ್ ಪ್ರಕರಣದಲ್ಲಿ ಜೈಲು ಸೇರಿ ಬಂದಿದ್ದ.
ಜೈಲಿನಿಂದ ಹೊರ ಬಂದ ಮೇಲೆ ಆರೋಪಿ ಹಾಗೂ ಯುವತಿ ಮತ್ತೆ ಒಂದಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಇಬ್ಬರೂ ಪರಸ್ಪರ ಪ್ರೀತಿಯಲ್ಲಿ ಬಿದ್ದಿದ್ದಾರೆ. ಬೇರೆ ಬೇರೆ ಕಡೆ ಸುತ್ತಾಟ ನಡೆಸಿದ್ದಾರೆ.
ನಂತರ ಮದುವೆಯಾಗುವುದಾಗಿ ಇಬ್ಬರೂ ನಿರ್ಧರಿಸಿದ್ದಾರೆ. ಆದರೆ, ಮದುವೆಗೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಪಡಿಸಿದ್ದಾರೆ. ವಿರೋಧದ ಮಧ್ಯೆಯೂ ಯುವತಿ ಮದುವೆಗೆ ಒಪ್ಪಿಗೆ ಸೂಚಿಸಿದ್ದಳು ಎನ್ನಲಾಗಿದೆ.
ಇತ್ತ ಯುವಕನ ಕುಟುಂಬಸ್ಥರು ಮದುವೆಗೆ ಸಿದ್ಧತೆ ಮಾಡಿಕೊಂಡಿದ್ದರು.
ಆದರೆ, ಏಕಾಏಕಿ ಯುವತಿ ಮದುವೆಗೆ ನಿರಾಕರಿಸಿದ್ದಳು ಎನ್ನಲಾಗಿದೆ. ಇದರಿಂದಾಗಿ ಯುವತಿಯ ಮೇಲೆ ಸಿಟ್ಟಾಗಿದ್ದ ಅಜಯ್, ಯುವತಿಯ ಮನೆಯ ಬಳಿ ತೆರಳಿ ಚಾಕುವಿನಿಂದ ಇರಿದಿದ್ದಾನೆ. ಆದರೆ, ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದು, ಯುವಕ ಜೈಲು ಪಾಲಾಗಿದ್ದಾನೆ.