ಕೊಡಗು: ಯುವಕನೊಬ್ಬ ಕೊಡಲಿಯಿಂದ ಕೊಚ್ಚಿ ತನ್ನ ಸ್ನೇಹಿತರನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದ ಬಸವೇಶ್ವರ ಬಡಾವಣೆಯಲ್ಲಿ ನಡೆದಿದೆ.
ಘಟನೆಯಲ್ಲಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಭೀಕರ ಘಟನೆ ಕಂಡು ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.
ಗಿರೀಶ್ ಕೊಲೆ ಮಾಡಿರುವ ವ್ಯಕ್ತಿ. ಜೋಸೆಫ್ ಹಾಗೂ ವಸಂತ ಕೊಲೆಯಾದ ದುರ್ದೈವಿ ಸ್ನೇಹಿತರು. ಈ ಮೂವರು ಕಳೆದ ಸುಮಾರು 15 ವರ್ಷಗಳಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲಸಕ್ಕಾಗಿ ಜೋಸೆಫ್ ಆಟೋ ತೆಗೆದುಕೊಂಡಿದ್ದ. ಅದೇ ಆಟೋದಲ್ಲಿ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದರು. ಆದರೆ, ಇತ್ತೀಚೆಗೆ ಜೋಸೆಫ್ ಹಾಗೂ ಗಿರೀಶ್ ಮದ್ಯೆ ಹಣಕ್ಕಾಗಿ ಜಗಳ ನಡೆದಿತ್ತು. ಗಿರೀಶ್, ಜೋಸೆಫ್ ಗೆ 3 ಸಾವಿರ ರೂ. ಹಣ ಕೊಡಬೇಕಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು.
ಇದೇ ವಿಚಾರ ವಿಕೋಪಕ್ಕೆ ತೆರಳಿದ್ದರಿಂದಾಗಿ ಗಿರೀಶ್ ಕೊಡಲಿಯಿಂದ ಜೋಸೆಫ್ ಹಾಗೂ ವಸಂತ ಮೇಲೆ ಹಲ್ಲೆ ನಡೆಸಿದ್ದಾನೆ. ಜೋಸೆಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ವಸಂತ ತಲೆಯಲ್ಲಿ ಕೊಡಲಿ ಸಿಲುಕಿದೆ. ಕೂಡಲೇ ವಸಂತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆಸ್ಪತ್ರೆಯಲ್ಲಿ ಕೊಡಲಿ ತೆಗೆಯುತ್ತಿದ್ದಂತೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಈ ಕುರಿತು ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಮೆಯಲ್ಲಿ ಪ್ರಕರಣ ದಾಖಲಾಗಿದೆ.