ಒಟ್ಟಾವಾ: ತಾಯಿಯೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿಯೇ ಭಾರತೀಯ ಮೂಲದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
ಬ್ರಿಟಿಷ್ ಕೊಲಂಬಿಯಾ (Canada’s British Columbia) ಪ್ರಾಂತ್ಯದಲ್ಲಿ ಭಾರತೀಯ ಮೂಲದ 28 ವರ್ಷದ ಯುವಕನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಯುವರಾಜ್ ಗೋಯಲ್ ಗುಂಡಿಗೆ ಬಲಿಯಾದ ಯುವಕ. ಈ ಯುವಕ ಪಂಜಾಬ್ ಮೂಲದವನು ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಾಲ್ವರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ. ಸರ್ರೆಯ ಮನ್ವಿರ್ ಬಸ್ರಾಮ್ (23), ಸಾಹಿಬ್ ಬಸ್ರಾ (20), ಹರ್ಕಿರತ್ ಜುಟ್ಟಿ (23 ) ಮತ್ತು ಒಂಟಾರಿಯೊದ ಕೆಲೋನ್ ಫ್ರಾಂಕೋಯಿಸ್ ( 20 ) ಎಂದು ಗುರುತಿಸಲಾಗಿದೆ.
ಗೋಯಲ್ ಅವರ ಸೋದರ ಮಾವ ಬವಾನ್ ದೀಪ್, ಯುವರಾಜ್ ಭಾರತದಲ್ಲಿರುವ ತನ್ನ ತಾಯಿಯೊಂದಿಗೆ ಫೋನ್ ನಲ್ಲಿ ಮಾತನಾಡುತ್ತಿದ್ದ. ಎಂದಿನಂತೆ ಜಿಮ್ ಮುಗಿಸಿ, ತಾಯಿಯೊಂದಿಗೆ ಮಾತನಾಡುತ್ತ, ಕಾರಿನಿಂದ ಇಳಿಯುತ್ತಿದ್ದಂತೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಅಲ್ಲಿನ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
