ಬೆಂಗಳೂರು: ಜೀಪ್ ಮೇಲೆ ಟಿಪ್ಪರ್ ಲಾರಿ ಪಲ್ಟಿಯಾಗಿರುವ ಘಟನೆಯೊಂದು ನಡೆದಿದೆ.
ಹುಳಿಮಾವು ಜಂಕ್ಷನ್ ನಲ್ಲಿ ಈ ಘಟನೆ ನಡೆದಿದೆ. ಲಾರಿ ಪಲ್ಟಿಯಾಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಚಾಲಕನ ಕಂಟ್ರೋಲ್ ತಪ್ಪಿದ ಪರಿಣಾಮ ಟಿಪ್ಪರ್ ಲಾರಿ, ಜೀಪ್ ಮೇಲೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀಪ್ ಮತ್ತು ಬೈಕ್ ನುಜ್ಜುಗುಜ್ಜಾಗಿದೆ. ಪವಾಡ ಎಂಬಂತೆ ಜೀಪ್ ನ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ, ಕೂದಲೆಳೆ ಅಂತರದಲ್ಲಿ ಬಿಎಂಟಿಸಿ ಬಸ್ ನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಲಾರಿ ಚಾಲಕ ಕಂಟ್ರೋಲ್ ತಪ್ಪಿದ ಬಳಿಕ ಎದುರಿಗೆ ಬರುತ್ತಿದ್ದ ಬಸ್ ಗೆ ಡಿಕ್ಕಿಯಾಗಬಹುದು ಎಂಬ ಕಾರಣಕ್ಕೆ ಏಕಾಏಕಿಯಾಗಿ ವಾಹನವನ್ನು ಬಲಕ್ಕೆ ತಿರುಗಿಸಿದ್ದಾನೆ. ಆ ವೇಳೆ ನಿಯಂತ್ರಣ ಕಳೆದುಕೊಂಡ ಲಾರಿ, ಜೀಪ್ ಮೇಲೆ ಉರುಳಿ ಬಿದ್ದಿದೆ. ಒಂದು ವೇಳೆ ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದಿದ್ದರೆ ದೊಡ್ಡ ಅನಾಹುತವೇ ನಡೆಯುತ್ತಿತ್ತು ಎನ್ನಲಾಗಿದೆ. ಸದ್ಯ ನಿರ್ಲಕ್ಷ್ಯ ತೋರಿದ ಟಿಪ್ಪರ್ ಚಾಲಕ ಶ್ರೀನಾಥ್ ಮೇಲೆ ಜೀಪ್ ಚಾಲಕ ಶಶಿಕಾಂತ್ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.


















