ರಾಮನಗರ: ಕಾರು ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮೂವರು ವ್ಯಕ್ತಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಹುಲಿಬೆಲೆ ಗ್ರಾಮದ ಹತ್ತಿರ ನಡೆದಿದೆ. ಲಾರಿ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಪರಿಣಾಮ ಕಾರಿನಲ್ಲಿದ್ದವರ ಮೃತದೇಹಗಳು ಛಿದ್ರ ಛಿದ್ರವಾಗಿವೆ. ಆದರೆ, ಮೃತರ ಗುರುತು ಪತ್ತೆ ಆಗಿಲ್ಲ. ಘಟನಾ ಸ್ಥಳಕ್ಕೆ ಕನಕಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರು ಕನಕಪುರ ಮಾರ್ಗದಿಂದ ಬರುತ್ತಿತ್ತು. ಸಂಗಮದ ಕಡೆ ಸರಕು ಲಾರಿ ತೆರಳುತ್ತಿತ್ತು ಎನ್ನಲಾಗಿದೆ. ಅತಿಯಾದ ವೇಗವೇ ಈ ಘಟನೆಗೆ ಕಾರಣ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.