ಬೆಂಗಳೂರು: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಬಲಿಯಾಗಿದ್ದಾರೆ. ಹೀಗಾಗಿ ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.
ಸಿಎಂ ಸಿದ್ದರಾಮಯ್ಯ (Siddaramaiah) ಮಂಗಳವಾರ ರಾತ್ರಿ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿದರು. ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಇದರ ಜವಾಬ್ದಾರಿಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ವಹಿಸಿದ್ದಾರೆ. ಅಲ್ಲದೇ, ಐಪಿಎಸ್ ಅಧಿಕಾರಿ ಚೇತನ್ ನೇತೃತ್ವದ ಅಧಿಕಾರಿಗಳ ತಂಡವನ್ನು ಕಾಶ್ಮೀರಕ್ಕೆ ಕಳಿಸಿಕೊಡಲಾಗಿದೆ. ಇದರೊಂದಿಗೆ ದೆಹಲಿಯಲ್ಲಿನ ಕರ್ನಾಟಕ ಭವನ ಕೂಡ ರಕ್ಷಣೆಗೆ ಬೇಕಾದ ಕಾರ್ಯ ನಿರ್ವಹಿಸಲಿದೆ.
ಸಿಎಂ ಸೂಚನೆ ಬೆನ್ನಲ್ಲೇ ಸಚಿವ ಸಂತೋಷ್ ಲಾಡ್ ಹುಬ್ಬಳ್ಳಿಯಿಂದ ದೆಹಲಿಗೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ವಿಶೇಷ ವಿಮಾನದಲ್ಲಿ ತೆರಳಿದ್ದಾರೆ.