ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವು ಬಲಿಷ್ಠ ಮುಂಬಯಿ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.
ಈ ಪಂದ್ಯದಲ್ಲಿ ಮುಂಬಯಿ ತಂಡ ನೀಡಿದ್ದ 382 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ಇನ್ನು 22 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ವಿಕೆಟ್ ಕೀಪರ್ ಕೆ.ಎಲ್. ಶ್ರೀಜಿತ್ ಭರ್ಜರಿ ಪ್ರದರ್ಶನ ನೀಡಿದ ಪರಿಣಾಮ ಕರ್ನಾಟಕ ತಂಡವು ಗೆಲುವು ಸಾಧಿಸಿದೆ. ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬಯಿ ತಂಡ ನಾಯಕ ಶ್ರೇಯಸ್ ಅಯ್ಯರ್ ಅವರ ಶತಕದಿಂದ ಬೃಹತ್ ರನ್ ಗಳಿಸಿತ್ತು. ಅಯ್ಯರ್ ಕೇವಲ 55 ಎಸೆತಗಳಲ್ಲಿ 114 ರನ್ ಗಳಿಸಿದರೆ, ಶಿವಂ ದುಬೆ ಕೂಡ ಕೇವಲ 36 ಎಸೆತಗಳಲ್ಲಿ ಅಜೇಯ 63 ರನ್ ಗಳಿಸಿದರು. ಹೀಗಾಗಿ ಮುಂಬಯಿ ತಂಡವು ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 382 ರನ್ ಗಳಿಸಿತ್ತು.
382 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ಕರ್ನಾಟಕ ಪರ ಅಬ್ಬರದ ಬ್ಯಾಟಿಂಗ್ ಮಾಡಿದ ಶ್ರೀಜಿತ್ ಕೇವಲ 101 ಎಸೆತಗಳಲ್ಲಿ 20 ಬೌಂಡರಿ ಹಾಗೂ 4 ಸಿಕ್ಸರ್ ಗಳ ನೆರವಿನಿಂದ ಅಜೇಯ 150 ರನ್ ಸಿಡಿಸಿದರು. ತಂಡದ ನಾಯಕ ಮಯಾಂಕ್ ಅಗರ್ವಾಲ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಅವರು 48 ಎಸೆತಗಳಲ್ಲಿ 47 ರನ್‌ಗಳ ಇನಿಂಗ್ಸ್ ಆಡಿದರು. ಕೆವಿ ಅನೀಶ್ ಕೂಡ 82 ರನ್ ಕೊಡುಗೆ ನೀಡಿದರು. ನಂತರ ಜೊತೆಯಾದ ಕೃಷ್ಣನ್ ಶ್ರೀಜಿತ್ ಮತ್ತು ಪ್ರವೀಣ್ ದುಬೆ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಈ ವೇಳೆ ಪ್ರವೀಣ್ ದುಬೆ 50 ಎಸೆತಗಳಲ್ಲಿ ಅಜೇಯ 65 ರನ್ ಗಳಿಸಿದರೆ, ಕೃಷ್ಣನ್ ಶ್ರೀಜಿತ್ 101 ಎಸೆತಗಳಲ್ಲಿ 150 ರನ್ ಗಳಿಸಿದರು. ಪರಿಣಾಮ ಕರ್ನಾಟಕ ತಂಡವು 46.2 ರಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.