ಬೆಂಗಳೂರು: ಮಗ ಆತ್ಮಹತ್ಯೆಗೆ ಶರಣಾಗಿದ್ದನ್ನು ಕಂಡ ತಾಯಿ ಕಣ್ಣೀರಿಡುತ್ತ ಇಹಲೋಕ ತ್ಯಜಿಸಿರುವ ಘಟನೆ ನಡೆದಿದೆ.
ಬೆಂಗಳೂರಿನಲ್ಲಿ (Self Harming) ಈ ಘಟನೆ ನಡೆದಿದೆ. ಕ್ಯಾಬ್ ಚಾಲಕ ಅರುಣ್ ಕುಮಾರ್ ಯಾವುದೋ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬೆಂಗಳೂರಿನ ಕಾವೇರಿಪುರದ ನಿವಾಸಿಯಾದ ಅರುಣ್ ಕುಮಾರ್ ರಾತ್ರಿ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನ ಅಗಲಿಕೆಯಿಂದ ಗೋಳಾಡಿದ್ದ ತಾಯಿ, ಮಗನ ಶವದ ಮುಂದೆ ಕಣ್ಣೀರಿಡುತ್ತಾ ಗೋಳಾಡುತ್ತಿದ್ದರು. ಆಗ ಮಗನ ನೋಡುತ್ತಲೆ ತಾಯಿಯು ಕೊನೆಯುಸಿರೆಳೆದಿದ್ದಾರೆ. ಅರುಣ್ ಕುಮಾರ್ ತಾಯಿ ಸರಸ್ವತಿ (78) ಸಾವನ್ನಪ್ಪಿದ ದುರ್ದೈವಿ.
ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ. ಅರುಣ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸಾವಿನಲ್ಲಿಯೂ ತಾಯಿ-ಮಗ ಒಂದಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.