ಕರಾವಳಿಯ ಯಕ್ಷಗಾನ ಮೇಳಗಳು ವರ್ಷದ ತಿರುಗಾಟ ಮುಗಿಸಿ, ಮಳೆಗಾಲದ ವಿಶ್ರಾಂತಿಗೆ ಮರಳಿವೆ. ವರ್ಷದ ಆರು ತಿಂಗಳುಗಳಷ್ಟೇ ಮಾತ್ರ ದುಡಿಯುವ ಯಕ್ಷಗಾನ ಕಲಾವಿದರಿಗೆ, ಮಳೆಗಾಲ ಕಳೆಯುವವರೆಗೆ ದುಡಿಮೆ ಇಲ್ಲ. ಈಗ ಮಳೆಗಾಲದಲ್ಲಿಅಲ್ಲಲ್ಲಿ ಸಂಯೋಜಕರು ಯಕ್ಷಗಾನ ಪ್ರದರ್ಶನಗಳನ್ನು ಮಾಡಿದರೂ ಕೂಡ ಅದು ಹೆಸರಾಂತ ಕಲಾವಿದರಿಗೆ ಮಾತ್ರ ದುಡಿಮೆಯ ದಾರಿಯಾಗುತ್ತದೆ. ಸಣ್ಣ ಪುಟ್ಟ ಕಲಾವಿದರಿಗೆ ದುಡಿಮೆಯೇ ಇಲ್ಲ. ಅಂತಹ ಕಲಾವಿದರು ತಮ್ಮ ಸ್ನೇಹಿತ ಕಲಾವಿರನ್ನೊಳಗೊಂಡು ʼಚಿಕ್ಕ ಮೇಳʼ ಮಾಡಿಕೊಂಡು ಮನೆಮನೆಗೆ ತೆರಳಿ ಯಾವುದಾದರೊಂದು ಯಕ್ಷಗಾನ ಪ್ರಸಂಗದ ಒಂದು ಸಣ್ಣ ಪ್ರದರ್ಶನ ಮಾಡುತ್ತಾರೆ. ಮನೆಯವರು ಕಲಾವಿದರಿಗೆ ಪ್ರೋತ್ಸಾಹದ ದೃಷ್ಟಿಯಲ್ಲಿ ಕಿಂಚಿತ್ತು ಹಣ ನೀಡಿ ಕಳುಹಿಸುತ್ತಾರೆ.

ಏನಿದು ಚಿಕ್ಕಮೇಳ ?
ಚಿಕ್ಕಮೇಳ ಇದು 5 ಜನರ ಗುಂಪು ಮನೆ ಮನೆಗೆ ತೆರಳಿ ಅಲ್ಪ ಕಾಲಾವಧಿಯಲ್ಲಿ ನೀಡುವ ಒಂದು ಪ್ರದರ್ಶನ. ಮಳೆಗಾಲದಲ್ಲಿ ಯಕ್ಷಗಾನ ತಿರುಗಾಟ ಸ್ಥಬ್ಧವಾಗುವ ಕಾರಣ ,ಯಕ್ಷಗಾನ ಕಲಾವಿದರು ಚಿಕ್ಕಮೇಳದ ರೂಪದಲ್ಲಿ ಜನರ ಮನೆ ಮನಗಳನ್ನು ತಲುಪುತ್ತಾರೆ. ಮಹಾಭಾರತ, ರಾಮಾಯಣದಂತಹ ಯಾವುದಾದರೂ ಪೌರಾಣಿಕ ಕಥೆಯ ಚಿಕ್ಕ ಭಾಗವನ್ನು ಆಯ್ದುಕೊಂಡು, ಸುಮಾರು 5 ರಿಂದ 10 ನಿಮಿಷಗಳ ಕಾಲ ಮನೆಯಲ್ಲಿ ಚಂಡೆ-ಗೆಜ್ಜೆಗಳ ನಾದವನ್ನು ಪಸರಿಸುತ್ತಾರೆ.
ಇಂತಹ ಒಂದು ಪ್ರಯತ್ನದಲ್ಲಿ “ಶ್ರೀ ಸೇನೇಶ್ವರ ಯಕ್ಷಗಾನ ವೈಭವ ಬೈಂದೂರು ನಿರತವಾಗಿದೆ. ಸತತ 9 ವರ್ಷಗಳಿಂದ ತಿರುಗಾಟ ನೆಡೆಸುತ್ತಿರುವ ಈ ತಂಡದಲ್ಲಿ ಸಂಚಾಲಕರಾಗಿ ಆನಂದಮೂರ್ತಿ ಹೆಬ್ಬಾರ್,ಭಾಗವತರಾಗಿ ದೇವರಾಜ್ ದಾಸ್ ಮರವಂತೆ,ಪುರುಷ ವೇಷದಾರಿಯಾಗಿ ಅನಂತ ಕುಣುಬಿ,ಸ್ತ್ರೀ ವೇಷದಾರಿಯಾಗಿ ಮಂಜುನಾಥ ಶೆಟ್ಟಿ ಹೆಬ್ಬಾಡಿ ಹಾಗೂ ಚಂಡೆ ವಿಭಾಗದಲ್ಲಿ ಆದಿತ್ಯ ಆಚಾರ್ಯ ಸೇನಾಪುರ ತಮ್ಮನ್ನ ತೊಡಗಿಸಿಕೊಂಡಿದ್ದಾರೆ.
ಸಣ್ಣ ಕಲಾವಿದರ ಮಳೆಗಾಲದ ಬದುಕು !
ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುವ ಎಷ್ಟೋ ಕಲಾವಿದರು ಇಂದು ಸ್ಟಾರ್ ಮಟ್ಟಕ್ಕೆ ತಲುಪಿದ್ದಾರೆ. ಬಹುಬೇಡಿಕೆಗಳಿಂದ ಒಂದೊಂದು ಪ್ರದರ್ಶನಕ್ಕೆ ೧೦,೦೦೦ ರೂ. ಅಥವಾ ಅದಕ್ಕಿಂತ ಹೆಚ್ಚು ಪಡೆಯುವವರು, ದುಡಿಯುವವರೂ ಇದ್ದಾರೆ. ಯಕ್ಷಗಾನ ಪ್ರದರ್ಶನದ ಸ್ವರೂಪ ಇಂದು ಒಂದು ಮಾರ್ಕೇಟಿಂಗ್ ಮಟ್ಟಕ್ಕೂ ತಲುಪಿದೆ. ವರ್ಷದ ಆರು ತಿಂಗಳುಗಳ ಕಾಲ ಹರಕೆ, ಕಟ್ಟುಕಟ್ಟಳೆ ಮಾದರಿಯಲ್ಲಿ ಪ್ರದರ್ಶನ ನೀಡುವ ಯಕ್ಷಗಾನ ಮೇಳಗಳು, ಮಳೆಗಾಲದಲ್ಲಿ ವಿಶ್ರಾಂತಿ ಪಡೆಯುತ್ತವೆ. ಅಂತಹ ಸಂದರ್ಭದಲ್ಲಿ ಯಕ್ಷಗಾನವನ್ನೇ ಜೀವನವನ್ನಾಗಿಸಿಕೊಂಡ ಅಸಂಖ್ಯ ಕಲಾವಿದರಿಗೆ ದುಡಿಮೆ ಇಲ್ಲ. ಕೇವಲ ಹೆಸರಾಂತ ಕಲಾವಿದರಷ್ಟೇ ವಿಶೇಷ ಆಯೋಜನೆಯಲ್ಲಿ ದುಡಿಯುತ್ತಾರೆ. ಇನ್ನುಳಿದವರಿಗೆ ಚಿಕ್ಕಮೇಳ ಅಥವಾ ಬೇರೆ ದುಡಿಮೆಯೇ ದಾರಿ.
ಆರಾಧನೆಯೊಂದಿಗೆ ಮನರಂಜನೆ :
ಮಳೆಗಾಲದಲ್ಲಿ ಸಾರ್ವಜನಿಕ ಯಕ್ಷಗಾನ ಪ್ರದರ್ಶನಗಳು ಕಡಿಮೆಯಾದಾಗ, ಚಿಕ್ಕಮೇಳವು ಮನೆಮನೆಗೆ ತೆರಳಿ ಪ್ರದರ್ಶನ ನೀಡುತ್ತದೆ. ಚಿಕ್ಕಮೇಳವು ಕರಾವಳಿಗರಿಗೆ ಆರಾಧನೆ ಮತ್ತು ಮನರಂಜನೆಯ ಒಂದು ರೂಪವಾಗಿದೆ. ಇದು ಕಲಾವಿದರಿಗೆ ಆದಾಯದ ಮೂಲವೂ ಆಗಿದೆ. ಕರಾವಳಿ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಮಳೆಗಾಲದಲ್ಲಿ ಕಾಣಸಿಗುತ್ತದೆ.