ನಟಿ ಸುಧಾರಾಣಿ ನಿರ್ಮಿಸಿ, ನಟಿಸಿದ ಘೋಸ್ಟ್ ಕಿರು ಚಿತ್ರವೂ ಸಸ್ಪೆನ್ಸ್ ಥ್ರಿಲ್ಲರ್ ಅಂಶ ಹೊಂದಿದೆ.

ಈ ಕುರಿತು ಮಾತನಾಡಿರುವ ಅವರು, ಜಗತ್ತಿನಲ್ಲಿ ಒಳ್ಳೆಯದು ಹೇಗಿದೆಯೋ ಹಾಗೆಯೇ ಕೆಟ್ಟದ್ದು ಇದೆ. ದೇವರು ಇದ್ದಾನೆ. ದೆವ್ವವು ಇದೆ. ಇದೆಲ್ಲವೂ ನಮ್ಮ ನಮ್ಮ ಕಲ್ಪನೆಗೆ ಬಿಟ್ಟದ್ದು. ಈ ವಿಚಾರದ ಮೇಲೆ ಬಂದಂತಹ ಒಂದು ಎಳೆಯನ್ನಿಟ್ಟುಕೊಂಡು ಕಿರು ಚಿತ್ರ ಮಾಡಿದ್ದೇನೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ನಿರ್ದೇಶಕರು ಈ ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ನಿರ್ಮಾಣದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದೇನೆ ಹಾಗೂ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದಿದ್ದಾರೆ.

ಚಿತ್ರದಲ್ಲಿ ಸುಧಾರಾಣಿ ಯವರ ಜೊತೆಗೆ ನಟಿಸುವುದರ ಜೊತೆಗೆ, ಕಿರು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ನಿರ್ದೇಶಕ ಸುದೇಶ್ ಕೆ ರಾವ್ ಮಾತನಾಡಿ ತಾವು ಇಲ್ಲಿಯ ತನಕ ಹಲವಾರು ಧಾರಾವಾಹಿಗಳಲ್ಲಿ ನಟಿಸಿರುವ ಬಗ್ಗೆ ಮತ್ತು ನಿರ್ದೇಶನ ಮಾಡಿರುವ ಕುರಿತು ಅನುಭವ ಹಂಚಿಕೊಂಡರು. ಘೋಸ್ಟ್ ಸ್ಪೆಷಲ್ ಕಥೆಯಾಗಿ ನಿಲ್ಲುತ್ತದೆ. ಪ್ರಪಂಚದಲ್ಲಿ ಇರುವುದೆಲ್ಲವೂ ಪಾಸಿಟಿವ್. ನಾವೇ ಎಲ್ಲದರಲ್ಲೂ ನೆಗೆಟಿವ್ ಹುಡುಕಿ, ನಮ್ಮ ತಲೆ ಮತ್ತು ಮನಸ್ಸನ್ನು ಕೆಡಿಸಿಕೊಳ್ಳುತ್ತೇವೆ. ಅಂತಹ ಎಲ್ಲರಿಗೂ ಈ ಶಾರ್ಟ್ ಫಿಲ್ಮ್ ಪರಿಹಾರ ನೀಡಬಹುದು ಎಂದು ಹೇಳಿದರು. “ಘೋಸ್ಟ್” ಕಿರುಚಿತ್ರಕ್ಕೆ “ದಿ ದೆವ್ವ” ಎಂಬ ಅಡಿಬರಹವಿದೆ.
