ದುಬೈ: ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ಮುನ್ನವೇ ಭಾರತಕ್ಕೆ ಆಘಾತ ಎದುರಾಗಿದೆ. ಬಾಂಗ್ಲಾದೇಶ ವಿರುದ್ಧ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್(Morne Morkel) ತವರಿಗೆ ಮರಳಿದ್ದಾರೆ. ಹೀಗಾಗಿ ಬೌಲಿಂಗ್ ಕೋಚ್ ಇಲ್ಲದೇ ಅಭ್ಯಾಸ ನಡೆಸುವಂತಾಗಿದೆ., ತಮ್ಮ ತಂದೆ ನಿಧನ ಹೊಂದಿದ ಕಾರಣಕ್ಕೆ ಅವರು ತವರು ದೇಶ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ದುಬೈಗೆ ತೆರಳಿದ್ದ ಭಾರತ ತಂಡದ ಜತೆ ಮೋರ್ಕೆಲ್ ಕೂಡಾ ಇದ್ದರು. ಅಭ್ಯಾಸ ಶಿಬಿರದಲ್ಲೂ ಮೋರ್ಕೆಲ್ ಉಪಸ್ಥಿತರಿದ್ದರು. ಸೋಮವಾರದಿಂದ ಅವರು ಕಾಣಿಸಲಿಲ್ಲ. ಇನ್ನು, ಅವರು ಚಾಂಪಿಯನ್ಸ್ ಟ್ರೋಫಿ ವೇಳೆ ತಂಡ ಕೂಡಿಕೊಳ್ಳುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಅವರು ಟೂರ್ನಿಯಿಂದ ಸಂಪೂರ್ಣವಾಗಿ ಹೊರಗುಳಿದರೆ ಭಾರತ ಬೌಲಿಂಗ್ ಕೋಚ್ ಇಲ್ಲದೆಯೇ ಪಂದ್ಯಾವಳಿ ಆಡುವ ಸಾಧ್ಯತೆ ಇದೆ.
ಜೆರ್ಸಿಯಲ್ಲಿ ಪಾಕ್ ಹೆಸರು; ಅಭಿಮಾನಿಗಳ ವಿರೋಧ
ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಹೊಸ ಜೆರ್ಸಿ ಮಂಗಳವಾರ ಬಿಡುಗಡೆಯಾಗಿತ್ತು. ವಿಶೇಷವೇನೆಂದರೆ, ಜೆರ್ಸಿಯಲ್ಲಿ ಆತಿಥ್ಯ ರಾಷ್ಟ್ರ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ. ಆದರೆ ಕೆಲ ಭಾರತೀಯ ಅಭಿಮಾನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಇಲ್ಲಿ ಯಾವುದೇ ದೇಶದ ಮಧ್ಯೆ ದ್ವೇಷ, ರಾಜತಾಂತ್ರಿಕ ಸಮಸ್ಯೆ ಇದ್ದರೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಆಡುವ ದೇಶಗಳು ತಮ್ಮ ಜೆರ್ಸಿಯಲ್ಲಿ ಆತಿಥ್ಯ ದೇಶದ ಹೆಸರನ್ನು ನಮೂದಿಸಲೇ ಬೇಕು.
ಭಾರತ ತಂಡ
ರೋಹಿತ್ ಶರ್ಮ (ನಾಯಕ), ಶುಭಮಾನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿ.ಕೀ), ರಿಷಭ್ ಪಂತ್ (ವಿ.ಕೀ), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಮೊಹಮದ್ ಶಮಿ, ಅರ್ಷದೀಪ್ ಸಿಂಗ್.



















