ಮಂಡ್ಯ: ಆಟವಾಡುತ್ತಿದ್ದ ಸಂದರ್ಭದಲ್ಲಿ ಬಾಲಕನೋರ್ವ ಬಂದೂಕಿನಿಂದ ಫೈರಿಂಗ್ ಮಾಡಿದ್ದು, 3 ವರ್ಷದ ಬಾಲಕ ಸಾವನ್ನಪ್ಪಿರುವ ಭಯಾನಕ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.ಮಂಡ್ಯ (Mandya) ಜಿಲ್ಲೆಯ ನಾಗಮಂಗಲ (Nagamangala) ತಾಲ್ಲೂಕಿನ ದೊಂದೇಮಾದಿಹಳ್ಳಿ ಗ್ರಾಮದಲ್ಲಿ ಈ ನಡೆದಿದೆ. ಪಶ್ಚಿಮ ಬಂಗಾಳ ಮೂಲದ ಶಶಾಂಕ್ ಹಾಗೂ ಲಿಪಿಕಾ ದಂಪತಿಯ ಮಗ ಅಭಿಷೇಕ್(3) ಘಟನೆಯಲ್ಲಿ ಸಾವನ್ನಪ್ಪಿದ ದುರ್ದೈವಿ. ಈ ದಂಪತಿ ಕಾಂಗ್ರೆಸ್ ಮುಖಂಡ ನರಸಿಂಹಮೂರ್ತಿ ಅವರ ಕೋಳಿ ಫಾರಂನಲ್ಲಿ ಕಳೆದ ಕೆಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ನರಸಿಂಹಮೂರ್ತಿ ಬಳಕೆ ಮಾಡುತ್ತಿದ್ದ ಬಂದೂಕು ಮಗುವಿನ ಕೈಗೆ ಆಟವಾಡುತ್ತಿದ್ದ ವೇಳೆ ಸಿಕ್ಕಿದೆ.
ಆ ಮಗು ಅದು ಅಸಲಿ ಎಂಬುವುದು ಗೊತ್ತಾಗದೆ ಫೈರಿಂಗ್ ಮಾಡಿದೆ. ಪರಿಣಾಮ ಅಲ್ಲೇ ಇದ್ದ ಅಭಿಷೇಕ್ ಹೊಟ್ಟೆಯೊಳಗೆ ಗುಂಡು ಹೋಗಿದೆ. ತಾಯಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕೂಡಲೇ ನಾಗಮಂಗಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದೆ. ಸ್ಥಳಕ್ಕೆ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನಾಗಮಂಗಲ ಗ್ರಾಮಾಂತರ ಠಾಣೆ ಪೊಲೀಸರು ಬಂದೂಕು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.